ಉಡುಪಿ : ಮಹಾಲಕ್ಷ್ಮಿ ಕೋ – ಆಪರೇಟಿವ್ ಬ್ಯಾಂಕ್ ಲಿ. ಕುರಿತು ವಿವಾದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧ್ಯಕ್ಷರಾದ ಯಶ್ ಪಾಲ್ ಎ ಸುವರ್ಣ ಅವರ ಪತ್ರಿಕಾಗೋಷ್ಠಿಗೆ ಮಾಜಿ ಶಾಸಕ ರಘುಪತಿ ಭಟ್ ಅವರು ಪತ್ರದ ಮೂಲಕ ಕೆಲ ವಿಚಾರಗಳನ್ನು ಮುಂದಿಟ್ಟು ತಿರುಗೇಟು ನೀಡಿದ್ದಾರೆ
ನ.9 ರಂದು ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿರುವಂತೆ ಸಿ.ಬಿ.ಐ., ಇ.ಡಿ. ಇನ್ನಿತರ ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ನೀವು ಹೇಳಿರುವುದು ಪ್ರಶಂಸಾರ್ಹ, ಆದರೆ ಈ ತನಿಖೆಗಳನ್ನು ನಡೆಸುವ ಮುಂಚಿತವಾಗಿ ಉಡುಪಿ ಹಾಗೂ ಇನ್ನಿತರ ಪೊಲೀಸ್ ಠಾಣೆಗಳಲ್ಲಿ ಸಂತ್ರಸ್ತರು ಇಗಾಗಲೇ ನೀಡಿರುವ ದೂರುಗಳ ಮೇಲೆ ಆಗಿರುವ ಎಫ್.ಐ.ಆರ್. ಮೇಲೆ ನೀವು ಉಚ್ಚನ್ಯಾಯಲಯದಿಂದ ತಡೆಯಾಜ್ಞೆ ತಂದಿದ್ದು, ಸದ್ರಿ ತಡೆಯಾಜ್ಞೆಯನ್ನು ತೆರವುಗೊಳಿಸಿ ತನಿಖೆಗೆ ಸ್ಪಂದಿಸಿ, ಸಾಲದ ಅರ್ಜಿಗಳಲ್ಲಿ ಹಾಗೂ ಸಾಲದ ದಾಖಲಾತಿಗಳಲ್ಲಿ ಸಂತ್ರಸ್ತರು ಸಹಿ ಅಲ್ಲ ಎಂದು ಹೇಳುತ್ತಿರುವ ಕಾರಣ ಸದ್ರಿ ಸಹಿಗಳ ಸತ್ಯಸತ್ಯಾತೆಯನ್ನು ತಿಳಿಯಲು ಪೊಲೀಸ್ ಇಲಾಖೆಯ ಮೂಲಕವೇ ಫಾರೆನ್ಸಿಕ್ (ವಿಧಿ ವಿಜ್ಞಾನ ಪ್ರಯೋಗಾಲಯ) ವಿಚಾರಣೆಗೆ ಕಳುಹಿಸಲು ಅನುವು ಮಾಡಿಕೊಡಬೇಕು.
ಉಚ್ಚನ್ಯಾಯಲಯದಿಂದ ತಡೆಯಾಜ್ಞೆಯನ್ನು ಹಿಂಪಡೆದು ನ್ಯಾಯಯುತವಾದ ತನಿಖೆ ನಡೆದು ಸತ್ಯಸತ್ಯಾತೆಯು ತಿಳಿಯಬೇಕು. ನನ್ನ ಹೋರಾಟವು ನಮಗೆ ಅನ್ಯಾಯವಾಗಿದೆಯೆಂದು ತಮ್ಮ ಅಳಲು ತೋಡಿಕೊಂಡು ಸಹಾಯ ನಿರೀಕ್ಷಿಸಿದ ಸಂತ್ರಸ್ತರ ಹಿತ ಕಾಪಾಡುವುದೇ ಹೊರತು, ತಮ್ಮ ಅಥವಾ ಬ್ಯಾಂಕಿನ ವಿರುದ್ಧ ಆಗಿರುವುದಿಲ್ಲ. ಇದರಲ್ಲಿ ನನ್ನ ಯಾವುದೇ ವೈಯಕ್ತಿಕ ಹಿತಾಸಕ್ತಿಯಿರುವುದಿಲ್ಲ. ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿರುವ ಸಾಲಗಾರ ಸಂತ್ರಸ್ತರ ಪರ ಕಾನೂನು ಹೋರಾಟ ಮಾಡಿದರೆ ಇನ್ಮುಂದೆ ಸಹಾಯ ಮಾಡಲು ಬದ್ಧನಾಗಿರುವೆ ಎಂದು ರಘುಪತಿ ಭಟ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

