ನಮ್ಮನ್ನಾಳುವ ಸರ್ಕಾರಗಳ ಕಿವುಡ ಜನಪ್ರತಿನಿಧಿಗಳು ಹಾಗೂ ದಪ್ಪ ಚರ್ಮದ ಅಧಿಕಾರಿಗಳಿಗೆ ಜನರು ಅದೆಷ್ಟೇ ಹಿಡಿಶಾಪ ಹಾಕಿದರೂ ಎಮ್ಮೆಯ ಮೇಲೆ ನೀರು ಸುರಿದಂತೆ ನಿಷ್ಪ್ರಯೋಜಕ ಎಂದು ಈ ಸರ್ವರ್ ಸಮಸ್ಯೆಯಲ್ಲಿಯೇ ತಿಳಿಯುತ್ತದೆ
ಕಳೆದ ಹಲವು ವರ್ಷಗಳಿಂದ ಆಗುತ್ತಿರುವ ಸರ್ವರ್ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ, ಪಡಿತರ ಅಂಗಡಿಗಳ ಮುಂದೆ ಇಡೀ ದಿನ ಕಾದರೂ ಜನರಿಗೆ ರೇಷನ್ ಸಿಗುತ್ತಿಲ್ಲ!
ಪ್ರತಿ ಬಾರಿ ಜನಸಾಮಾನ್ಯರು ಕೇಳುವ ಪ್ರಶ್ನೆಗೆ ಬರುವ ಉತ್ತರ ಒಂದೇ ಅದು ಸರ್ವರ್ ಬಿಝಿ. ಸರ್ವರ್ ಓಪನ್ ಆಗ್ತಾಯಿದೆ ಆದರೆ ಸರ್ವರ್ಗಳು ಕೆಲಸ ಮಾತ್ರ ಮಾಡುವುದೇ ಇಲ್ಲ. ಅದೂ ಸಹ ನಮ್ಮ ರಾಜಕಾರಣಿಗಳಂತೆಯೇ ಆಗಿವೆ ಎನ್ನಬಹುದು.
ಪ್ರತಿ ತಿಂಗಳು, 10 ರಿಂದ 15ನೇ ತಾರೀಖಿನೊಳಗೆ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಫಲಾನುಭವಿಗಳಿಗೆ ರೇಷನ್ ಸಿಗುತ್ತದೆ. ಆದರೆ ಈ ಬಾರಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಸಿಗದೆ ಜನಸಾಮಾನ್ಯರಿಗೆ ಸಮಸ್ಯೆವುಂಟಾಗಿದೆ. ಇದಕ್ಕೆ ಕಾರಣ ರೇಷನ್ ವಿತರಣೆಯ ತಂತ್ರಾಂಶದಲ್ಲಿ ಕಂಡು ಬಂದ ಸರ್ವರ್ ಸಮಸ್ಯೆವೆಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದೇನು ಹೊಸತೇನಲ್ಲ, ಪ್ರತಿ ಬಾರಿಯ ಗೋಳು.
ಮೂಲಗಳ ಪ್ರಕಾರ ರಾಜ್ಯದಲ್ಲಿ ಈ ಬಾರಿ ಕೇವಲ ಶೇಕಡಾ 5-10ರಷ್ಟು ಮಾತ್ರವೇ ಪಡಿತರ ವಿತರಣೆಯಾಗಿದೆ. ಈ ಮೊದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ’ಯು ತನ್ನದೇ ಆದ ಪ್ರತ್ಯೇಕ ತಂತ್ರಾಂಶವನ್ನು ಹೊಂದಿತ್ತು. ಒಟಿಪಿ ವ್ಯವಸ್ಥೆಯ ಮೂಲಕ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿತ್ತು. ಪ್ರಸ್ತುತ ಅದನ್ನು ಕೈ ಬಿಟ್ಟು, ಸರ್ವರ್ ಮುಖೇನ್ ಬೆರಳು ಗುರುತು ಪಡೆದು ಚೀಟಿ ನೀಡಿ ಧಾನ್ಯ ವಿತರಣೆ ಮಾಡಲಾಗುತ್ತಿದೆ.
ನ್ಯಾಯಬೆಲೆ ಅಂಗಡಿಯ ಮುಂದೆ ಗಂಟೆಗಟ್ಟಲೇ ನಿಂತರು ರೇಷನ್ ಸಿಗುತ್ತಿಲ್ಲ, ಸರ್ವರ್ ಸಮಸ್ಯೆ ನಾಳೆ ಬನ್ನಿ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.
ಸರ್ಕಾರ ನೀಡುವ ಕಡಿಮೆ ಬೆಲೆಯ ರೇಷನ್ ನಿಂದ ಸಿಗುವ ಲಾಭವು ಮತ್ತೊಂದೆಡೆ ದಿನನಿತ್ಯ ಅಲೆಯುವ ಮೂಲಕ ರಜೆ ಹಾಕಿದ ರೂಪದಲ್ಲಿ ಕಾರ್ಮಿಕರಿಗೆ ನಷ್ಟದ ರೂಪದಲ್ಲಿ ಹೋಗುತ್ತಿದೆ
ಕೂಡಲೇ ಸರ್ಕಾರವು ನ್ಯಾಯಬೆಲೆ ಅಂಗಡಿಯ ತಂತ್ರಾಂಶವನ್ನು ಸರಿಪಡಿಸಿಕೊಂಡು ವಾರಗಳಿಂದಲೂ ಕಾಯುತ್ತಿರುವ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಧವಸ ಧಾನ್ಯಗಳನ್ನು ನೀಡುವಂತೆ ರಾಜ್ಯದ ಜನತೆ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರವು ಇನ್ನಾದರೂ ಈ ವಿಷಯದಲ್ಲಿ ಕುರುಡುತನವನ್ನು ಬಿಟ್ಟು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

