ಉಡುಪಿ : ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ವೃದ್ಧೆ ಮತ್ತು ಆಕೆಯೊಂದಿಗೆ ಇದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಕ್ಷಿಸಲಾಗಿದೆ.
ಬಾಗಲಕೋಟೆ ಮೂಲದ ಪಕೀರವ್ವ (75) ಎಂಬ ವೃದ್ಧೆಯು ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಅಸಹಾಯಕ ಸ್ಥಿತಿಯಲ್ಲಿದ್ದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ನಿತ್ಯಾನಂದ ಒಳಕಾಡು ಅವರು ವೃದ್ಧೆಯ ಬಳಿ ವಿಚಾರಿಸಿದಾಗ, ತನ್ನ ಮೊಮ್ಮಕ್ಕಳ ತಂದೆ, ಒಂದು ವರ್ಷದಿಂದ ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಹುಡುಕಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ.
ವೃದ್ಧೆಯನ್ನು ಹೊಸ ಬದುಕು ಆಶ್ರಮಕ್ಕೆ ಸೇರಿಸಲಾಗಿದೆ. ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಇಬ್ಬರು ಮಕ್ಕಳ ಪೈಕಿ ಹನುಮಂತ (10)ನನ್ನು ದೊಡ್ಡಣಗುಡ್ಡೆಯ ಬಾಲಕರ ಬಾಲಭವನಕ್ಕೆ ಮತ್ತು ಪ್ರೇಮಾ(16)ಳನ್ನು ನಿಟ್ಟೂರು ಬಾಲಕಿಯರ ಬಾಲ ಭವನಕ್ಕೆ ಸೇರಿಸಲಾಗಿದೆ.

