ಪುಷ್ಪ-2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಬಲಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ತೆಲಂಗಾಣ ಚಿಕ್ಕಡಪಲ್ಲಿ ಪೊಲೀಸರು ಇಂದು ಬೆಳಗ್ಗೆ ಅರೆಸ್ಟ್ ಮಾಡಿದ್ದಾರೆ.
ಪ್ರಕರಣದ ಹಿನ್ನಲೆ :
ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋ ವೇಳೆಯಲ್ಲಿ ಕಾಲ್ತುಳಿತ ಸಂಭವಿಸಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಳು. ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ತೆಲಂಗಾಣ ಚಿಕ್ಕಡಪಲ್ಲಿ ಪೊಲೀಸರು ಇಂದು ಬೆಳಗ್ಗೆ ಅರೆಸ್ಟ್ ಮಾಡಿದ್ದಾರೆ.
ಮೃತ ರೇವತಿಯು ಪತಿ ಭಾಸ್ಕರ್ ಮತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಪ್ರೀಮಿಯರ್ ಶೋಗೆ ಹಾಜರಾಗಿದ್ದರು. ರಾತ್ರಿ 10:30ರ ಸುಮಾರಿಗೆ ಸ್ಕ್ರೀನಿಂಗ್ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಏಕಕಾಲಕ್ಕೆ ನುಗ್ಗಿದ ಪರಿಣಾಮದಿಂದಾಗಿ ಈ ದುರಂತ ಸಂಭವಿಸಿದೆ. ನಾಯಕನನ್ನು ನೋಡಲು ಜನರು ಗೇಟ್ನತ್ತ ನುಗ್ಗಿದರ ಪರಿಣಾಮ ಕಾಲ್ತುಳಿತ ಉಂಟಾಗಿತ್ತು. ಈ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಅಲ್ಲು ಅರ್ಜುನ್ ಅವರ ಆಗಮನದ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಮತ್ತು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯ ತಳ್ಳಾಟದಿಂದ ನೂಕು ನುಗ್ಗಲು ಇನ್ನಷ್ಟು ಉಲ್ಬಣವಾಗಿದೆ ಎಂಬ ಆರೋಪ ಇದೆ.
BNS ಕಾಯಿದೆಯ U/s 105 ಮತ್ತು 118(1) ಮತ್ತು r/w 3(5)ರಡಿಯಲ್ಲಿ ಪ್ರಕರಣವು ದಾಖಲಾಗಿದೆ. ನಟ ಅಲ್ಲು ಅರ್ಜುನ್, ಸಂಧ್ಯಾ ಥಿಯೇಟರ್ ಮ್ಯಾನೇಜ್ಮೆಂಟ್ ಮತ್ತು ಅಲ್ಲು ಅರ್ಜುನ್ ಅವರ ಭದ್ರತಾ ಸಿಬ್ಬಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

