ಮಂಗಳೂರು : “ ಡ್ರಗ್ಸ್ ಫ್ರಿ ಮಂಗಳೂರು ” ನಿರ್ಮಾಣದ ಉದ್ದೇಶದಿಂದ ಮಂಗಳೂರು ಸಿಸಿಬಿ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಮುಂಬೈಯಿಂದ ಮಂಗಳೂರಿಗೆ ಪ್ರವೇಶಿಸುತ್ತಿದ್ದ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಹಿಡಿದು 6.7 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯು ಉಡುಪಿಯ ನಿವಾಸಿಯಾಗಿರುವ ಅಖಿಲೇಶ್ ಎಂದು ಗುರುತಿಸಲಾಗಿದೆ. ಆರೋಪಿಯು ಮಂಗಳೂರು ನಗರಕ್ಕೆ ಮುಂಬೈಯಿಂದ ಗಾಂಜಾವನ್ನು ಖರೀದಿಸಿಕೊಂಡು ಮುಲ್ಕಿ ಪರಿಸರದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು, ಮುಲ್ಕಿ ಬಪ್ಪನಾಡು ಪರಿಸರದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯಿಂದ 1,62,000ರೂ ಮೌಲ್ಯದ 6.7 ಕೆಜಿ ನಿಷೇಧಿತ ಮಾದಕ ವಸ್ತು ಗಾಂಜಾ, ಮೊಬೈಲ್ ಫೋನ್ ಮತ್ತು 660ರೂ ನಗದು ಅನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಮಲ್ಪೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟದ ಪ್ರಕರಣ, ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಉಡುಪಿ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿದೆ.
“ ಡ್ರಗ್ಸ್ ಫ್ರಿ ಮಂಗಳೂರು ” ಕಾರ್ಯಾಚರಣೆಯಲ್ಲಿ, ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಸುದೀಪ್ ಎಂ ವಿ, ಎಎಸ್ಐ ರಾಮ ಪೂಜಾರಿ, ಶೀನಪ್ಪ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

