ಕೋಟ:- ಗೂಡ್ಸ್ ರಿಕ್ಷಾ ಮತ್ತು ಸ್ಕೂಟರ್ ಪರಸ್ಪರ ಢಿಕ್ಕಿಯಾಗಿ ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನದ ವೇಳೆ ಕೋಟ ಸಮೀಪದ ಗುಂಡ್ಮಿ ಗ್ರಾಮದ ಚೇಂಪಿ ಎಂಬಲ್ಲಿ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದ ಎದುರು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಡೆದಿದೆ. ಸ್ಕೂಟರ್ ಸವಾರ ಅನಂತ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಜೊತೆಗಿದ್ದ ಸಹಸವಾರ ವಿಶ್ವನಾಥ ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೂಡ್ಸ್ ರಿಕ್ಷಾವು ಮಲ್ಪೆಯಿಂದ ಗುಲ್ವಾಡಿಗೆ ಹೋಗುತ್ತಿತ್ತು. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದಿದೆ. ದುರಂತವನ್ನು ತಪ್ಪಿಸುವ ಭರದಲ್ಲಿ ಡಿವೈಡರ್ ಮೇಲೆ ಹತ್ತಿದ ರಿಕ್ಷಾ ಪಲ್ಟಿಯಾಗಿದೆ.
ನಡೆದ ದುರ್ಘಟನೆಯಲ್ಲಿ ಸ್ಕೂಟರ್ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದು ಇದರಲ್ಲಿ ಗಂಭೀರವಾಗಿ ಗಾಯಗೊಂಡ ಅನಂತ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ರಸ್ತೆ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


