ಉಡುಪಿ : ರಾಜ್ಯದ ಕರಾವಳಿ ಭಾಗದಲ್ಲಿ ವಿಪರೀತವಾಗಿ ಮಳೆಯಾಗುತ್ತಿದ್ದು, ಭಾರಿ ಮಳೆ ಗಾಳಿಯ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು ಯಾವುದೇ ವರ್ಗದ ನಾಡದೋಣಿಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಹಾಗಾಗಿ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನು ಸಿಗದೆ ಜನರು ಶೀತಲೀಕರಣ ಘಟಕದಲ್ಲಿ ಸಿಗುವ ಪ್ಯಾಕೇಟ್ ಮೀನಿನತ್ತ ಮೊರೆ ಹೋಗಿದ್ದಾರೆ.
ಹೌದು, ಕರಾವಳಿ ಭಾಗದಲ್ಲಿ ಶೀತಲೀಕರಿಸಿದ ಮೀನಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮಾತ್ರವಲ್ಲದೇ ಮಲ್ಪೆಯಲ್ಲಿ ಮೀನು ಮಾರಾಟದ ಮಹಿಳೆಯರು, ಪುರುಷರು ಸೇರಿದಂತೆ ಜನರು ಮೀನು ಖರೀದಿಗೆ ಮುಂದಾಗಿರುವುದು ಕಂಡು ಬಂದಿದೆ.
ಶೀತಲೀಕರಿಸಿದ ಮೀನಿನ ದರ ಪ್ರಸ್ತುತ ಸರಿಯಾದ ಮೀನು ಇಲ್ಲದೆ ಸ್ಥಳೀಯ ಶೀತಲೀಕರಣ ಪ್ಲಾಂಟ್ನಲ್ಲಿ ಪ್ಯಾಕೆಟ್ ಮೀನುಗಳು ಭಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಶೀತಲೀಕರಣ ಪ್ಲಾಂಟ್ನಲ್ಲಿ ಮಾರಾಟವಾಗುವ ವಿವಿಧ ಗಾತ್ರದ ಮೀನುಗಳು ಕೆ.ಜಿ. ಲೆಕ್ಕಾಚಾರದಲ್ಲಿ ಈ ರೀತಿ ಇದೆ. ಅಂಜಲ್ ಕೆ.ಜಿ. ಗೆ 800-1000 ರೂ., ಸಿಗಡಿ 300-350 ರೂ., ಪಾಂಪ್ರಟ್ ಕಪ್ಪು 350-450 ರೂ., ಗೋಂಕೆ 100-150 ರೂ., ಬಂಗುಡೆ 150-200 ರೂ., ಬೂತಾಯಿ 100-190 ರೂ., ಡಿಸ್ಕೋ 130-150 ರೂ., ಮುರುಮೀನು 130-150 ರೂ., ಕಲ್ಲರ್ 150-170 ರೂ., ಬತ್ತಿ 150-200 ದರದಲ್ಲಿ ಮಾರಾಟವಾಗುತ್ತಿದೆ.
ಮೀನು ಮಾರಾಟಗಾರರು ಇಲ್ಲಿ ಕೆ.ಜಿ. ಗಟ್ಟಲೆ ಮೀನು ಖರೀದಿಸಿ ವಿವಿಧ ಮಾರುಕಟ್ಟೆಗಳಿಗೆ, ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಹೊರ ರಾಜ್ಯದ ತಾಜಾ ಮೀನು ಬಂದಿಲ್ಲ ದೇಶದ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆಗೆ ರಜೆ ಇರುವಾಗ ಪೂರ್ವ ಕರಾವಳಿ ಬಂದರುಗಳಾದ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯದಲ್ಲಿ ಮೀನುಗಾರಿಕೆಗೆ ನಿಷೇಧ ಇರುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಅಲ್ಲಿನ ತಾಜಾ ಮೀನುಗಳನ್ನು ಮೀನು ವ್ಯಾಪಾರಿಗಳು ಇಲ್ಲಿಗೆ ಲಾರಿ ಮೂಲಕ ತಂದು ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿ ಅಲ್ಲಿ ತೂಫಾನ್ ಇರುವುದರಿಂದ ಬೋಟುಗಳು ಇಳಿದಿಲ್ಲ. ಜೂ.18ರ ಬಳಿಕ ಆರಂಭವಾಗುವ ನಿರೀಕ್ಷೆ ಇದೆ.
ನಾಡದೋಣಿಗಳೂ ಹೋಗುತ್ತಿಲ್ಲ ಕೇರಳದಲ್ಲಿ ಜೂ. 10ರ ವರೆಗೆ ಯಾಂತ್ರಿಕ ಮೀನುಗಾರಿಕೆ ಇತ್ತು. ವಾರದ ಹಿಂದೆ ಅಲ್ಲಿನ ಬೂತಾಯಿ ಮೀನುಗಳನ್ನು ಇಲ್ಲಿಗೆ ತರಿಸಲಾಗಿತ್ತು. ಮಳೆಗಾಲದಲ್ಲಿ ಅಲ್ಲಿಯೂ ಯಾಂತ್ರಿಕ ಮೀನುಗಾರಿಕೆಗೆ ನಿಷೇಧ ಇರುವುದರಿಂದ ನಾಡದೋಣಿಗಳಿಗೆ ಮಾತ್ರ ಅವಕಾಶ. ಇದೀಗ ಜೋರಾಗಿ ಗಾಳಿ ಇರುವುದರಿಂದ ಯಾವುದೇ ದೋಣಿಗಳು ಹೋಗುತ್ತಿಲ್ಲ. ಪೂರ್ವ ಬಂದರಿನಲ್ಲಿ ಮೂರು ನಾಲ್ಕು ದಿನದಲ್ಲಿ ಮೀನುಗಾರಿಕೆ ಆರಂಭವಾಗಲಿದ್ದು, ಬಳಿಕ ಇಲ್ಲಿನ ಮಾರುಕಟ್ಟೆಯಲ್ಲಿ ತಾಜಾ ಮೀನು ದೊರೆಯಲಿದೆ.

