ಮೂಡಬಿದಿರೆ: ವಿದ್ಯಾರ್ಥಿನಿಯನ್ನೇ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮೂಡುಬಿದಿರೆಯ ಪ್ರತಿಷ್ಠಿತ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತನ ಮೇಲೆ ಎಫ್ ಐ ಆರ್ ದಾಖಲಾಗಿದ್ದು , ಮೂವರನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಹಿಳಾ ಆಯೋಗಕ್ಕೆ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಿ ಉಪನ್ಯಾಸಕರಾದ ನರೇಂದ್ರ, ಸಂದೀಪ್ ಮತ್ತು ಸ್ನೇಹಿತ ಅನೂಪ್ ಅವರನ್ನು ಬಂಧಿಸಲಾಗಿದೆ.
ಕಾಲೇಜು ದಿನಗಳಲ್ಲಿ ಸಲುಗೆಯಿಂದ ಇದ್ದ ವಿದ್ಯಾರ್ಥಿನಿಗೆ ಸಹಾಯ ಮಾಡುವ ನೆಪದಲ್ಲಿ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ ಪರಿಚಯವಾಗಿದ್ದು, ವಿದ್ಯಾರ್ಥಿನಿ ಬೆಂಗಳೂರಿಗೆ ಹೋದ ನಂತರವೂ ಸಲುಗೆ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಗೆಳೆಯನ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರ ಜೀವಶಾಸ್ತ್ರ ಉಪನ್ಯಾಸಕ ಸಂದೀಪ್ ಗೆ ತಿಳಿದು ಅವನು ಹುಡುಗಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಮತ್ತೆ ಅತ್ಯಾಚಾರ ಎಸಗಿದ್ದಲ್ಲದೆ ಇವರ ಸ್ನೇಹಿತ ಅನೂಪ್ ಕೂಡ ನನ್ನ ರೂಮಿನ ಸಿಸಿಟಿವಿ ದೃಶ್ಯ ಇದೆ ಎಂದು ಅತ್ಯಾಚಾರ ಮಾಡಿರುತ್ತಾರೆ.
ಮೊದಲು ಹೆದರಿ ಸುಮ್ಮನಿದ್ದ ವಿದ್ಯಾರ್ಥಿನಿ ಇವರ ಕಿರುಕುಳ ತಾಳಲಾರದೆ ಪೋಷಕರಿಗೆ ತಿಳಿಸಿದ್ದು, ಪೋಷಕರು ಮಹಿಳಾ ಆಯೋಗದ ಮುಖಾಂತರ ದೂರು ನೀಡಿರುತ್ತಾರೆ. ಮೂಡುಬಿದಿರೆಯಲ್ಲಿ ಓದು ಮುಗಿಸಿದ್ದ ವಿದ್ಯಾರ್ಥಿನಿ, ಬೆಂಗಳೂರಿನಲ್ಲಿ ಓದು ಮುಂದುವರಿಸಿದ್ದಳು.

