ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಒಬ್ಬರು ಬಂಟ್ವಾಳ ಪೇಟೆಯಲ್ಲಿನ ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ರವಿವಾರ ಸಂಜೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಖೀರಪ್ಪ ಗಟಕಂಬಳಿ(54) ಆತ್ಮಹತ್ಯೆಗೆ ಶರಣಾದ ಪಿಎಸ್ಐ.
ಖೀರಪ್ಪ ಶಿರಸಿ ಠಾಣೆಯಿಂದ ಕಳೆದ 5 ತಿಂಗಳ ಹಿಂದಷ್ಟೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ತನಿಖಾ ವಿಭಾಗದ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಕುಟುಂಬ ಉತ್ತರ ಕನ್ನಡದಲ್ಲೇ ಇದ್ದು, ಇವರೊಬ್ಬರೇ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಶನಿವಾರ ಅವರು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿದ್ದರು. ಆದರೆ ರವಿವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಆದ್ದರಿಂದ ಠಾಣೆಯಿಂದ ದೂರವಾಣಿ ಕರೆ ಮಾಡಿದಾಗ ಅವರು ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಠಾಣಾ ಸಿಬ್ಬಂದಿ ಮನೆಗೆ ತೆರಳಿ ಅವರನ್ನು ಕರೆದಾಗ ಸ್ಪಂದಿಸಿರಲಿಲ್ಲ. ಕಿಟಕಿಯಲ್ಲಿ ನೋಡಿದಾಗ ಅವರು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

