ಕೊಲ್ಲೂರು: ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದ ಜಡ್ಕಲ್ನ ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ಗುಡ್ಡ ದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಭಾಸ್ಕರ (70) ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಅವರು ಕಳೆದ ವರ್ಷ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಸೆ. 2ರಂದು ಮನೆಯವರೆಲ್ಲ ದೇಗುಲಕ್ಕೆ ಸಂಜೆ ಹೊರಟಾಗ ಭಾಸ್ಕರ ಮನೆಯಲ್ಲೇ ಉಳಿದುಕೊಂಡಿದ್ದರು.
ಮನೆಯ ಉಳಿದ ಸದಸ್ಯರು ರಾತ್ರಿ ಮನೆಗೆ ಮರಳಿದಾಗ ಎದುರಿನ ಬಾಗಿಲು ಮುಚ್ಚಿತ್ತು. ಎಷ್ಟು ಕರೆದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮನೆಯ ಪಕ್ಕದಲ್ಲಿರುವ ಅಂಗಡಿ, ಗದ್ದೆ ತೋಟದಲ್ಲಿ ಹುಡುಕಾಡಿದರೂ ಭಾಸ್ಕರ ಅವರ ಪತ್ತೆಯಾಗಿಲ್ಲ. ಹಾಡಿಯಲ್ಲಿ ಹುಡುಕಿದಾಗ ಅಲ್ಲಿನ ಒಂದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

