ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ
ಇಲಾಖೆಯಲ್ಲಿ ಖಾಲಿ ಇರುವ 36 ಔಷಧ ಪರಿವೀಕ್ಷಕರ ಹುದ್ದೆಗಳನ್ನು ಕೆಪಿಎಸ್ಸಿ ಮುಖಾಂತರ ನೇರ ನೇಮಕಾತಿಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಉಳಿಕೆ ಮೂಲ ವೃಂದದ 26 ಹಾಗೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 10 ಹುದ್ದೆಗಳು ಇದರಲ್ಲಿ ಸೇರಿವೆ. ಆರ್ಥಿಕ ಇಲಾಖೆಯ ಸಹಮತಿ ಮೇರೆಗೆ ಹುದ್ದೆ ಭರ್ತಿಗೆ ಆರೋಗ್ಯ ಇಲಾಖೆ ಅನುಮತಿ ನೀಡಿದೆ. 2018ರಲ್ಲಿ ಒಟ್ಟು 83 ಹುದ್ದೆಗಳ ಭರ್ತಿಗೆ ಅಧಿ ಸೂಚನೆ ಹೊರಡಿಸಲಾಗಿತ್ತು. ಆ ಪೈಕಿ 60+7 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ, ನೇಮಕ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿ ದಾಖಲಿಸಲಾಗಿದೆ.
ಔಷಧ ಅಂಗಡಿಗಳ ಪರಿವೀಕ್ಷಣೆ, ಗುಣಮಟ್ಟದ ಪರೀಕ್ಷೆಗೆ ಮಾದರಿ ಪಡೆಯುವುದು, ಸಂಸ್ಥೆಗಳ ವಿರುದ್ದ ಕ್ರಮ ಸೇರಿ ಹಲವು ಕರ್ತವ್ಯಗಳಿಗೆ ಇಲಾಖೆಯಲ್ಲಿ ಔಷಧ ಪರಿವೀಕ್ಷಕರ ಕೊರತೆ ಹೆಚ್ಚಾಗಿದೆ. ಹೀಗಾಗಿ, ಕೆಪಿಎಸ್ಸಿಯಿಂದ ಪಡೆಯಲಾದ 60+7 ಹುದ್ದೆಗಳಿಗೆ ಅಭ್ಯರ್ಥಿ ಆಯ್ಕೆಪಟ್ಟಿ ಹೊರತುಪಡಿಸಿ ಅವರ ಜೇಷ್ಠತೆ ಉಳಿಸಿ ಕೊಂಡು ಖಾಲಿ ಉಳಿಕೆಯ ಮೂಲ ವೃಂದದ 26 ಹಾಗೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 10 ಹುದ್ದೆಗಳ ಭರ್ತಿಗೆ ಕ್ರಮ ವಹಿಸಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

