ಉಡುಪಿ : ಇಂದ್ರಾಳಿ ರೈಲ್ವೆ ನಿಲ್ದಾಣ ಸಂಪರ್ಕಿಸುವ ಜಾರ್ಜ್ ಫರ್ನಾಂಡಿಸ್ ರಸ್ತೆಯಲ್ಲಿರುವ, ಯೂನಿಯನ್ ಬ್ಯಾಂಕ್ ಬಳಿ, ರಕ್ತವಾಂತಿ ಮಾಡಿಕೊಂಡು ಗಂಭೀರ ಸ್ಥಿತಿಯಲ್ಲಿದ್ದ, ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.
ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಆರಕ್ಷಕ ಸಿಬ್ಬಂದಿಗಳಾದ ಸಂದೀಪ್ ಮತ್ತು ಗಪೂರ್ ಅವರು, ಯುವಕನ ಗಂಭೀರ ಸ್ಥಿತಿಯಲ್ಲಿರುವುದನ್ನು ಗಮನಿಸಿ, ಒಳಕಾಡು ಅವರಿಗೆ ತಿಳಿಸಿದ್ದರು.
ಕೂಡಲೇ ಸ್ಪಂದಿಸಿದ ಒಳಕಾಡುವರು ತಡರಾತ್ರಿ ಮಣಿಪಾಲದ ಮನೆಯಿಂದ ಅಂಬುಲೆನ್ಸ್ ವಾಹನದಲ್ಲಿ ಬಂದು, ರೋಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ರೋಗಿ ದಾಖಲು ಪ್ರಕ್ರಿಯೆ ನಡೆಸುವಾಗ, ಹೆಸರು ಜಮೀರ್,(40 ವ) ತಂದೆ ಅನ್ವರ್, ಹಾವೇರಿಯ ನಿವಾಸಿ ಎಂದು ಹೇಳಿ ಕೊಂಡಿದ್ದಾನೆ.
ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ತುರ್ತಾಗಿ ಸಂಪರ್ಕಿಸಲು ಸೂಚಿಸಲಾಗಿದೆ.

