ಕರ್ನಾಟಕ ರಾಜ್ಯ SSLC ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಶೇಕಡಾ 94 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಬಡತನ ಅಡ್ಡಿಯಾಗಲಾರದು ಅನ್ನುವುದಕ್ಕೆ ಶಂಕರನಾರಾಯಣ ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿ ಪ್ರೀತಮ್ ಪೂಜಾರಿಯ ಸಾಧನೆಯೇ ಸಾಕ್ಷಿ. ಶಂಕರನಾರಾಯಣದ ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ ಪೂಜಾರಿ 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆಯ ಗಣಪತಿ ಪೂಜಾರಿ ಮತ್ತು ನಾಗರತ್ನ ದಂಪತಿಗಳ ಪುತ್ರ ಪ್ರೀತಮ್ ಪೂಜಾರಿ. ತಂದೆ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದು ತಾಯಿ ನಾಗರತ್ನ ಗೃಹಿಣಿ. ದಂಪತಿಗಳ ದ್ವಿತೀಯ ಪುತ್ರ ಇದೇ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾನೆ.
ಎಲ್ ಕೆ ಜಿ ಯಿಂದ 10 ನೇ ತರಗತಿಯವರೆಗೆ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಶಾಲೆಯಲ್ಲೇ ಓದಿರುವ ಪ್ರೀತಮ್ ಜಿ ಪೂಜಾರಿಯವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಬೋಧಕ ವೃಂದ ಹರ್ಷ ವ್ಯಕ್ತಪಡಿಸಿದೆ.

