ಚೆನ್ನೈ : ಕೋವಿಡ್ ಲಾಕ್ಡೌನ್ ವೇಳೆ ಅಂಗಡಿ ತೆರೆದಿದ್ದಾರೆ ಎಂಬ ಕಾರಣಕ್ಕೆ ತಂದೆ ಹಾಗೂ ಮಗ ಇಬ್ಬರನ್ನು ಅರೆಸ್ಟ್ ಅತ್ಯಂತ ಕ್ರೂರವಾಗಿ ಥಳಿಸಿ, ಇದರ ಪರಿಣಾಮ ತಂದೆ ಹಾಗೂ ಮಗ ಇಬ್ಬರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಕೋರ್ಟ್ ಇದೀಗ ಐತಿಹಾಸಿಕ ತೀರ್ಪು ನೀಡಿದೆ. ಅತ್ಯಂತ ಕ್ರೂರವಾಗಿ ಥಳಿಸಿ ಸಾವಿಗೆ ಕಾರಣರಾದ 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ತಮಿಳುನಾಡಿನ ಮಧುರೈ ಜಿಲ್ಲಾ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್ಕುಳಂ ಕಸ್ಟಡಿ ಸಾವಿನ ಪ್ರಕರಣದಲ್ಲಿ ಮಧುರೈ ಜಿಲ್ಲಾ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ಆರೋಪಿಗಳಾದ ಒಂಬತ್ತು ಪೊಲೀಸರಿಗೂ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಇದೊಂದು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ‘ಭವಿಷ್ಯದಲ್ಲಿ ಇಂತಹ ಕಸ್ಟಡಿ ಸಾವುಗಳು ಮರುಕಳಿಸಬಾರದು, ಅದಕ್ಕೆ ಈ ಶಿಕ್ಷೆ ಒಂದು ಎಚ್ಚರಿಕೆಯಾಗಬೇಕು ಎಂದು ಕೋರ್ಟ್ ಹೇಳಿದೆ.
ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಸಾಕಾಗುವುದಿಲ್ಲ, ಎಲ್ಲರೂ ಸಮಾನ ಅಪರಾಧಿಗಳು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ‘ಯಾರು ಹೆಚ್ಚು ಹಿಂಸೆ ನೀಡಿದರು ಎಂಬ ಪ್ರಶ್ನೆ ಇಲ್ಲಿ ಅಪ್ರಸ್ತುತ’ ಎಂದು ಕೋರ್ಟ್ ಹೇಳಿದೆ. ಶಿಕ್ಷೆಗೊಳಗಾದವರಲ್ಲಿ ಒಬ್ಬ ಇನ್ಸ್ಪೆಕ್ಟರ್, ಇಬ್ಬರು ಸಬ್-ಇನ್ಸ್ಪೆಕ್ಟರ್ಗಳು, ಇಬ್ಬರು ಹೆಡ್ ಕಾನ್ಸ್ಟೆಬಲ್ಗಳು ಮತ್ತು ನಾಲ್ವರು ಕಾನ್ಸ್ಟೆಬಲ್ಗಳು ಸೇರಿದ್ದಾರೆ. ಈ ಕೃತ್ಯದ ನೇತೃತ್ವ ವಹಿಸಿದ್ದ ಇನ್ಸ್ಪೆಕ್ಟರ್ ಶ್ರೀಧರ್ಗೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ 2 ಬಾರಿ ಗಲ್ಲು ಶಿಕ್ಷೆ ಮತ್ತು 84 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

