ಅಜೆಕಾರು: ಇಲ್ಲಿನ ಹೆರ್ಮುಡೆ ಸಮೀಪದ ರೇಂಜ ಎಂಬಲ್ಲಿ ಕೇವಲ ಒಂದು ತಿಂಗಳು ಹತ್ತು ದಿನ ಪ್ರಾಯದ ಗಂಡು ಮಗುವೊಂದು ನಿಗೂಢವಾಗಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಉಡುಪಿಯ ಹಾವಂಜೆ ಗ್ರಾಮದ ನಿವಾಸಿ ದೀಕ್ಷೀತಾ ಎಂಬುವವರಿಗೆ ಮೇ ೧ ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಎರಡನೇ ಹೆರಿಗೆಯಾಗಿದ್ದು, ಅವಳಿ ಮಕ್ಕಳು (ಒಂದು ಗಂಡು, ಒಂದು ಹೆಣ್ಣು) ಜನಿಸಿದ್ದವು. ಮೇ ೯ ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದ ದೀಕ್ಷೀತಾ ಅವರು ಹೆರ್ಮುಡೆಯ ರೇಂಜ ಎಂಬಲ್ಲಿ ತಮ್ಮ ತಂದೆ ಕೆಲಸ ಮಾಡುತ್ತಿದ್ದ ತೋಟದ ಬಾಡಿಗೆ ಮನೆಗೆ ಬಂದು ನೆಲೆಸಿದ್ದರು.
ಜೂನ್ 9 ರಂದು ಬೆಳಗ್ಗೆ ೬ ಗಂಟೆಯ ಸುಮಾರಿಗೆ ದೀಕ್ಷೀತಾ ಅವರು ಗಂಡು ಮಗುವಿಗೆ ಹಾಲುಣಿಸಿ ಮಲಗಿಸಿದ್ದರು. ಆದರೆ, ಬೆಳಗ್ಗೆ ೭ ಗಂಟೆಯ ಹೊತ್ತಿಗೆ ಮಗುವನ್ನು ಎಬ್ಬಿಸಲು ಅಲ್ಲಾಡಿಸಿ ನೋಡಿದಾಗ ಮಗು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಕ್ಷಣ ಅವರು ತಮ್ಮ ತಾಯಿಯನ್ನು ಕರೆದು ಮಗುವನ್ನು ಪರಿಶೀಲಿಸಿದಾಗ, ಮಗುವಿನ ಮೂಗಿನಲ್ಲಿ ರಕ್ತ ಸೋರುತ್ತಿರುವುದು ಕಂಡುಬಂದಿದೆ.
ಆಸ್ಪತ್ರೆಗೆ ದಾಖಲು:
ಮಗುವಿನ ಮೈ ಇನ್ನು ಬಿಸಿಯಾಗಿಯೇ ಇದ್ದುದರಿಂದ ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ, ಈಗಾಗಲೇ ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ.
ಹಾಲುಣಿಸಿ ಮಲಗಿಸಿದ್ದ ಮಗು ದಿಢೀರನೆ ಮೃತಪಟ್ಟಿರುವುದು ಕುಟುಂಬಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಈ ಘಟನೆಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಿದೆ.
ಈ ನಿಗೂಢ ಸಾವಿನ ಕುರಿತು ತಾಯಿ ದೀಕ್ಷೀತಾ ಅವರು ನೀಡಿದ ದೂರಿನ ಮೇರೆಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 12/2026, ಕಲಂ: 194 BNSS (Bharatiya Nagarik Suraksha Sanhita) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

