ಪರ್ಕಳ: ಸ್ಥಳೀಯ ಅಂಚೆ ಇಲಾಖೆಯ ಬೇಜವಾಬ್ದಾರಿತನದಿಂದಾಗಿ ಪರ್ಕಳದ ಹೃದಯಭಾಗದಲ್ಲಿರುವ ಉಪ ಅಂಚೆ ಕಚೇರಿಯಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಗ್ರಾಹಕರು ಹಾಗೂ ಹಿರಿಯ ನಾಗರಿಕರು ತೀವ್ರ ಪರದಾಡುವಂತಾಗಿದೆ.
ಮೊಬೈಲ್ ದುರಸ್ತಿಗೆ ಹೋಗಿ ಎರಡು ತಿಂಗಳು ಮುಕ್ತಾಯ!
ಪರ್ಕಳ ಅಂಚೆ ಕಚೇರಿಯಲ್ಲಿ ಡಿಜಿಟಲ್ ಖಾತೆ (Digital Account) ಹೊಂದಿರುವ ಗ್ರಾಹಕರು ತಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಪರಿಶೀಲಿಸಲು ಅಥವಾ ಹಣ ಜಮೆ ಮಾಡಲು ಹೋದರೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ ಹಾಗೂ ಕೇಂದ್ರ ಸರ್ಕಾರದ ಕೃಷಿ ಪ್ರೋತ್ಸಾಹ ಧನ ತಮ್ಮ ಖಾತೆಗೆ ಜಮೆಯಾಗಿದೆಯೇ ಎಂದು ಪರಿಶೀಲಿಸಲು ಬರುವ ಗ್ರಾಹಕರಿಗೆ ನಿರಾಶೆಯಾಗುತ್ತಿದೆ.
ಇದಕ್ಕೆ ಮುಖ್ಯ ಕಾರಣ, ಕಚೇರಿಯ ಕರ್ತವ್ಯಕ್ಕೆ ನೀಡಲಾಗಿದ್ದ ಇಲಾಖೆಯ ಮೊಬೈಲ್ ಫೋನ್ ಕೈಕೊಟ್ಟಿರುವುದು. ಇಲಾಖೆಯ ಅಧಿಕಾರಿಗಳು ಈ ಮೊಬೈಲ್ ಅನ್ನು ದುರಸ್ತಿಗೆಂದು ಪಡೆದುಕೊಂಡು ಹೋಗಿ ಬರೋಬ್ಬರಿ ಎರಡು ತಿಂಗಳು ಕಳೆದರೂ, ಇದುವರೆಗೆ ಅದನ್ನು ವಾಪಸ್ ನೀಡಿಲ್ಲ. ಪರ್ಯಾಯವಾಗಿ ಹೊಸ ಮೊಬೈಲ್ ವ್ಯವಸ್ಥೆಯನ್ನೂ ಮಾಡದೆ ಇರುವುದರಿಂದ ಅಂಚೆ ಸಿಬ್ಬಂದಿಗೂ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

