ಮಂಗಳೂರು: ಡ್ರಗ್ಸ್ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಮಂಗಳೂರು ಪೊಲೀಸರು ವಿದ್ಯಾರ್ಥಿಗಳಿದ್ದ ಬಸ್ಸು, ಇನ್ನಿತರ ವಾಹನಗಳನ್ನು ತಪಾಸಣೆ ನಡೆಸಿದ್ದಾರೆ.
ಕೋಟೆಕಾರು ಮತ್ತು ಕೊಣಾಜೆ ಬಂಟರ ಸಂಘದಲ್ಲಿ ಮಂಗಳೂರು ಸೆಂಟ್ರಲ್ ಮತ್ತು ದಕ್ಷಿಣ ಉಪ ವಿಭಾಗದ ಎಸಿಪಿಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ತಪಾಸಣೆ ಗೆ ಒಳಪಡಿಸಿದ್ದಾರೆ.
ಉಳ್ಳಾಲದ ಕೋಟೆಕಾರಿನಲ್ಲಿ ಎಸ್ಡಿಎಂ ಕಾಲೇಜು, ನಿಟ್ಟೆ ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜು, ಸಂತ ಅಲೋಶಿಯಸ್ ಕಾಲೇಜು, ಪಿಎಚ್ ಕಾಲೇಜು, ಬ್ಯಾರೀಸ್ ಇನ್ಸ್ಟಿಟ್ಯೂಟ್, ಟಿಪ್ಪು ಸುಲ್ತಾನ ಕಾಲೇಜು, ಕೆನರಾ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗಿದೆ. ತಪಾಸಣೆ ಮಾಡಿದ 72 ವಿದ್ಯಾರ್ಥಿಗಳ ಪೈಕಿ ಒಬ್ಬನ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.
ಕೊಣಾಜೆಯಲ್ಲಿ ಪಿಎ ಕಾಲೇಜಿನ 87 ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗಿದ್ದು ಎಲ್ಲರ ಫಲಿತಾಂಶ ನೆಗೆಟಿವ್ ಬಂದಿದೆ.
ಸಂಜೆ 4.30 ರಿಂದ 6 ಗಂಟೆಯ ನಡುವೆ ಈ ತಪಾಸಣೆ ಮಾಡಲಾಗಿದೆ. ಡ್ರಗ್ಸ್ ತಪಾಸಣೆಯಲ್ಲಿ ಪಾಸಿಟಿವ್ ಬಂದಿರುವ ವಿದ್ಯಾರ್ಥಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಳಿಕ ಕೌನ್ಸಲಿಂಗ್ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

