ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು ತಕ್ಷಣದ ಕ್ರಮ ಕೈಗೊಂಡಿದ್ದು ಜೈಲಾಧಿಕಾರಿಯೊಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಧಿಕಾರಿ ಅಮಾನತು ಮತ್ತು ನೋಟಿಸ್ ಜಾರಿ
ಜೈಲಿನಲ್ಲಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ, ದಕ್ಷಿಣ ವಿಭಾಗದ ಡಿಐಜಿ ನೀಡಿದ ವರದಿಯನ್ನು ಆಧರಿಸಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಲಾಗಿದೆ. ಇದರೊಂದಿಗೆ ಬೆಂಗಳೂರು ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ (ಎಸ್ಪಿ) ಅನ್ನುಕುಮಾರ್ ಅವರಿಗೂ ‘ಕಾರಣ ಕೇಳಿ’ (ಶೋಕಾಸ್) ನೋಟಿಸ್ ಜಾರಿ ಮಾಡಲಾಗಿದ್ದು, ಜೈಲಿನ ಭದ್ರತೆಯ ಬಗ್ಗೆ ಡಿಜಿಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೋಧ ಕಾರ್ಯದಲ್ಲಿ ಸಿಕ್ಕಿತು ಮೊಬೈಲ್
ಸಿಸಿಬಿ ಪೊಲೀಸರು ನಿನ್ನೆ ಮಧ್ಯಾಹ್ನ ನಟ ದರ್ಶನ್, ಪವಿತ್ರಗೌಡ ಹಾಗೂ ಪ್ರಜ್ವಲ್ ರೇವಣ್ಣ ಸೇರಿದಂತೆ ಎಲ್ಲಾ ವಿಐಪಿ ಕೈದಿಗಳ ಕೊಠಡಿ ಹಾಗೂ ಬ್ಯಾರಕ್ಗಳಲ್ಲಿ ಸುಮಾರು 4ರಿಂದ 6 ಗಂಟೆಗಳ ಕಾಲ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಅವರು ತಮ್ಮ ಹಾಸಿಗೆಯ ಅಡಿಯಲ್ಲಿ ಅಡಗಿಸಿಟ್ಟಿದ್ದ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ.
ಗಮನಾರ್ಹವೆಂದರೆ, ಆಗಸ್ಟ್ 6 ರಂದು ನಡೆದಿದ್ದ ದಾಳಿಯ ವೇಳೆ ಯಾವುದೇ ಮೊಬೈಲ್ ಪತ್ತೆಯಾಗಿರಲಿಲ್ಲ. ಕೇವಲ ಕೆಲವೇ ದಿನಗಳ ಅಂತರದಲ್ಲಿ ಮೊಬೈಲ್ ಜೈಲಿನ ಒಳಗೆ ತಲುಪಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ. ಈ ಕಾರ್ಯಾಚರಣೆಯಲ್ಲಿ ಮೊಬೈಲ್ ಹೊರತುಪಡಿಸಿ ಬೇರೆ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ಡಿಜಿಪಿ ಸ್ಪಷ್ಟಪಡಿಸಿದ್ದಾರೆ.
ನಿಯಮಗಳ ಉಲ್ಲಂಘನೆ
ಜೈಲಿನಲ್ಲಿ ಕೈದಿಗಳು ಕಡ್ಡಾಯವಾಗಿ ಧರಿಸಬೇಕಾದ ಬಿಳಿ ಬಟ್ಟೆಯನ್ನು ಪ್ರಜ್ವಲ್ ರೇವಣ್ಣ ಧರಿಸುತ್ತಿರಲಿಲ್ಲ ಎನ್ನುವ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಎಲ್ಲಾ ಸವಲತ್ತುಗಳು ಯಾರ ಪ್ರಚೋದನೆ ಮತ್ತು ಸಹಕಾರದಿಂದ ಸಿಗುತ್ತಿವೆ ಎಂಬ ಬಗ್ಗೆ ಇಲಾಖೆ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಪ್ರಜ್ವಲ್ಗೆ ಖಡಕ್ ಎಚ್ಚರಿಕೆ
ಜೈಲಿನ ಒಳಗೆ ಮೊಬೈಲ್ ತಲುಪಿಸಿದ್ದು ಯಾರು ಎನ್ನುವ ಬಗ್ಗೆ ಮಧ್ಯಾಹ್ನದ ಒಳಗೆ ಮಾಹಿತಿ ನೀಡಬೇಕು; ಇಲ್ಲವಾದಲ್ಲಿ ಕೂಡಲೇ ಬೇರೆ ಬ್ಯಾರಕ್ಗೆ ಸ್ಥಳಾಂತರಿಸಲಾಗುವುದು ಎಂದು ಪ್ರಜ್ವಲ್ ರೇವಣ್ಣ ಅವರಿಗೆ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯು ಕಾರಾಗೃಹದ ಒಳಗಿನ ಭದ್ರತಾ ಲೋಪಗಳ ಬಗ್ಗೆ ಮತ್ತೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದ್ದು, ಉನ್ನತ ಮಟ್ಟದ ವಿವರವಾದ ತನಿಖೆ ಮುಂದುವರಿದಿದೆ.

