ಮಂಗಳೂರು: ನಗರದಲ್ಲಿ ವಾಹನಗಳ ಸುಗಮ ಸಂಚಾರ, ಸುರಕ್ಷಿತ ಸಂಚಾರದ ಬಗ್ಗೆ ಕಾಳಜಿ ವಹಿಸಿರುವ ಮಂಗಳೂರು ನಗರ ಪೊಲೀಸರು ವಿಶೇಷ ಸಂಚಾರ ಕಾರ್ಯಾಚರಣೆ ನಡೆಸಿದ್ದು, ಕಳೆದ ಎರಡೇ ತಿಂಗಳಲ್ಲಿ ಒಟ್ಟು 7490 ಪ್ರಕರಣಗಳು ದಾಖಲಾಗಿವೆ.
ನಗರ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡುವ, ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿರುವುದಾಗಿದೆ. ಪಾದಚಾರಿಗಳ ಸುರಕ್ಷತೆೆಗೆ ಅಡ್ಡಿಯಾಗುವ, ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ನೋ ಪಾರ್ಕಿಂಗ್, ಫುಟ್ಪಾತ್ ಪಾರ್ಕಿಂಗ್, ತಪ್ಪಾದ ಪಾರ್ಕಿಂಗ್, ಡಬಲ್ ಪಾರ್ಕಿಂಗ್, ಸಂಚಾರ ಅಡಚಣೆ ಹಾಗೂ ಇತರೆ ಪಾರ್ಕಿಂಗ್ ನಿಯಮ ಉಲ್ಲಂಘನೆಗಳ ವಿರುದ್ಧ ಜೂನ್ 2026 ರಿಂದ ಈವರೆಗೆ ಒಟ್ಟು 7,490 ಪ್ರಕರಣಗಳನ್ನು ದಾಖಲಿಸಲಾಗಿದೆ. ಜೊತೆಗೆ 3,07,600 ರೂ. ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ 1080 ಫುಟ್ಪಾತ್ ಪಾರ್ಕಿಂಗ್ ಸಂಬಂಧಿತ ಪ್ರಕರಣಗಳೇ ಹೆಚ್ಚಾಗಿವೆ.
ಹಾಗೆಯೇ ನಕಲಿ ಹಾಗೂ ದೋಷಪೂರಿತ ನಂಬರ್ ಪ್ಲೇಟ್ ಗಳನ್ನು ಬಳಸಿಕೊಂಡು ಸಂಚರಿಸುವುದು ಮತ್ತು ಅವುಗಳ ಮೂಲಕ ಅಪರಾಧ ಕೃತ್ಯಗಳನ್ನು ಎಸಗುವುದನ್ನು ತಡೆಗಟ್ಟುವ ಉದ್ದೇಶದಿಂದ ಆ.4 ರಿಂದ ಆ.12ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ 258 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂಬರ್ ಪ್ಲೇಟ್ ಅಳವಡಿಸದೇ ಸಂಚರಿಸುತ್ತಿದ್ದ 74 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು 332 ಪ್ರಕರಣಗಳನ್ನು ದಾಖಲಿಸಿ 3,01,000 ರೂ. ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

