ನವದೆಹಲಿ: ರಾಷ್ಟ್ರ ರಾಜಧಾನಿ ಯಲ್ಲಿರುವ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರು ಧ್ವಜಾರೋಹಣ ಮಾಡುವ ಮೂಲಕ 80 ನೇ ಸ್ವಾತಂತ್ರೋತ್ಸವ ಶುಭಾಶಯಗಳನ್ನು ಜನರಿಗೆ ತಿಳಿಸಿದ್ದಾರೆ. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಸತತ 13 ನೇ ಬಾರಿ ಕೆಂಪು ಕೋಟೆಯಲ್ಲಿ ಪ್ರಧಾನ ಮಂತ್ರಿ ಮೋದಿ ಭಾಷಣ ಮಾಡುವ ಮೂಲಕ ಐತಿಹಾಸಿಕವಾಗಿ ಈ ಮೈಲುಗಲ್ಲು ಸಾಧಿಸಿದ ಎರಡನೇ ಪ್ರಧಾನಿ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಮಾಜಿ ಪ್ರಧಾನಿ ದಿ. ಜವಹರಲಾಲ್ ನೆಹರೂ ಕೆಂಪುಕೋಟೆಯಲ್ಲಿ 17 ಬಾರಿ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ್ದರು.
ಇದೇ ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದಂದು ‘ವಂದೇ ಮಾತರಂ’ ಗೀತೆ ಮೊಳಗಿದ್ದು, ನೆರೆದಿದ್ದವರ ಮೈಮನ ರೋಮಾಂಚನಗೊಂಡಿತು.
ಪ್ರಧಾನಿ ಮೋದಿ ಅವರು ಭಾಷಣದಲ್ಲಿ ಭಾರತದ ಏಕತೆಯನ್ನು ಕೊಂಡಾಡಿದ್ದಾರೆ. ಇಂದು ಪ್ರತಿಯೊಬ್ಬ ಭಾರತೀಯನ ಹೃದಯವೂ ವಂದೇ ಮಾತರಂ ಧ್ವನಿಗೆ ಮಿಡಿಯುತ್ತಿದೆ. ಇಂದು ದೇಶದ ಪ್ರತಿಯೊಂದು ಮನೆಯೂ ತಿರಂಗಾ ಆಗಿದೆ, ಪ್ರತಿಯೊಬ್ಬರ ಮನವೂ ತಿರಂಗಾ ಆಗಿದೆ” ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, 2047ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ದೇಶದ ನಾಗರಿಕರು ದೊಡ್ಡ ಕನಸುಗಳೊಂದಿಗೆ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.

