ದಕ್ಷಿಣ ರೈಲ್ವೆಯ (SR) ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಉಳ್ಳಾಲ ಸೇರಿದಂತೆ ಮಂಗಳೂರು ಪ್ರದೇಶವನ್ನು ನೈರುತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ಭಾರತೀಯ ರೈಲ್ವೆ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ದೀರ್ಘಕಾಲದ ಬೇಡಿಕೆಯಾಗಿದ್ದ ಈ ಆಡಳಿತಾತ್ಮಕ ಬದಲಾವಣೆಯನ್ನು ರೈಲ್ವೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ (E&R) ದಿನೇಶ್ ಕುಮಾರ್ ವಸಿಷ್ಠ ಅವರು ಖಚಿತಪಡಿಸಿದ್ದು, ಹೊಸ ವ್ಯಾಪ್ತಿ ಬದಲಾವಣೆಯು ಅಕ್ಟೋಬರ್ 1, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ನಿರ್ಧಾರದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಸೇವೆಗಳ ನಿರ್ವಹಣೆ ಮತ್ತು ವಿಸ್ತರಣೆಗೆ ಹೊಸ ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಈ ಹೊಸ ಯೋಜನೆಯ ಪ್ರಕಾರ, ನೈರುತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ನಡುವಿನ ಇಂಟರ್ಚೇಂಜ್ ಪಾಯಿಂಟ್ (ರೈಲ್ವೆ ವಲಯಗಳ ಗಡಿ ಬದಲಾವಣೆ ಕೇಂದ್ರ) ಇನ್ಮುಂದೆ ಪ್ರಸ್ತುತ ಇರುವ ‘ಪಡೀಲ್’ ಬದಲಿಗೆ ‘ಉಳ್ಳಾಲ’ಕ್ಕೆ ಸ್ಥಳಾಂತರಗೊಳ್ಳಲಿದೆ. ಇನ್ನು ತೋಕೂರು ರೈಲು ನಿಲ್ದಾಣವು ಪ್ರಸ್ತುತ ಇರುವಂತೆಯೇ ಕೊಂಕಣ್ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ವ್ಯಾಪ್ತಿಯಲ್ಲಿಯೇ ಮುಂದುವರಿಯಲಿದ್ದು, ಇದು ಕೊಂಕಣ್ ರೈಲ್ವೆ ಹಾಗೂ ನೈರುತ್ಯ ರೈಲ್ವೆ ನಡುವಿನ ಪ್ರಮುಖ ಇಂಟರ್ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ. ಈ ವಲಯಗಳ ನಡುವಿನ ನಿಖರವಾದ ಆಡಳಿತಾತ್ಮಕ ಗಡಿರೇಖೆಗಳನ್ನು ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗುತ್ತದೆ.
ಆಡಳಿತಾತ್ಮಕ ಮತ್ತು ಸಿಬ್ಬಂದಿ ವರ್ಗಾವಣೆಗೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯು ಸ್ಪಷ್ಟ ಮಾರ್ಗದರ್ಶನ ನೀಡಿದೆ. ಗೆಜೆಟೆಡ್ ಅಧಿಕಾರಿಗಳು ಹಾಗೂ ಗ್ರೂಪ್-ಬಿ ಅಧಿಕಾರಿಗಳ ಹುದ್ದೆಗಳ ವರ್ಗಾವಣೆ ಆದೇಶಗಳನ್ನು ಚಾಲ್ತಿಯಲ್ಲಿರುವ ನಿಯಮಾವಳಿಗಳ ಪ್ರಕಾರ ಶೀಘ್ರದಲ್ಲೇ ಹೊರಡಿಸಲಾಗುತ್ತದೆ. ಇನ್ನು ನಾನ್-ಗೆಜೆಟೆಡ್ ಸಿಬ್ಬಂದಿಯನ್ನು “ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ” (As is where is basis) ವರ್ಗಾಯಿಸಲಾಗುತ್ತಿದ್ದು, ನೌಕರರಿಗೆ ದಕ್ಷಿಣ ರೈಲ್ವೆಯಲ್ಲೇ ಉಳಿದುಕೊಳ್ಳಲು ಅಥವಾ ನೈರುತ್ಯ ರೈಲ್ವೆಗೆ ಬದಲಾಯಿಸಲು ಅವಕಾಶ (Option) ಕಲ್ಪಿಸಲಾಗಿದೆ. ನೈರುತ್ಯ ರೈಲ್ವೆಯನ್ನು ಆಯ್ಕೆ ಮಾಡಿಕೊಳ್ಳುವ ನೌಕರರ ಜೇಷ್ಠತೆಯನ್ನು (Seniority) ಅವರ ಪ್ರಸ್ತುತ ಗ್ರೇಡ್ನ ಸೇವಾವಧಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಂಟ್ರೋಲ್ ಬೋರ್ಡ್ಗಳ ವರ್ಗಾವಣೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

