ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮದ ನಿವಾಸಿ ಗಂಗಾಧರ ಮಂಜರು ಎಂಬುವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಡ್ರೂಮ್ನಲ್ಲಿಟ್ಟಿದ್ದ ಬೀಗ ಹಾಕದ ಗೋಡ್ರೆಜ್ ಅಲ್ಮೆರಾದಿಂದ ಈ ಕಳುವು ನಡೆದಿದೆ. ಕಳೆದ ಆಗಸ್ಟ್ 17ರಂದು ಬೆಳಿಗ್ಗೆ 10:00 ಗಂಟೆಗೆ ಗಂಗಾಧರ ಅವರು ಗೋಡ್ರೆಜ್ನಲ್ಲಿದ್ದ ಪರ್ಸ್ ಪರಿಶೀಲಿಸಿದಾಗ ಆಭರಣಗಳು ಸುರಕ್ಷಿತವಾಗಿದ್ದವು. ಆದರೆ ಸೆಪ್ಟೆಂಬರ್ 06ರಂದು ರಾತ್ರಿ 07:30ರ ಸುಮಾರಿಗೆ ಆಭರಣಗಳನ್ನು ತೆಗೆಯಲು ಹೋದಾಗ ಕಳುವು ಪ್ರಕರಣ ಬೆಳಕಿಗೆ ಬಂದಿದೆ.
ಆಗಸ್ಟ್ 17ರಿಂದ ಸೆಪ್ಟೆಂಬರ್ 06ರ ನಡುವಿನ ಅವಧಿಯಲ್ಲಿ ಯಾರೋ ಅನಾಮಧೇಯ ಕಳ್ಳರು ಮನೆಗೆ ಪ್ರವೇಶಿಸಿ ಗೋಡ್ರೆಜ್ನಲ್ಲಿದ್ದ ಚಿನ್ನದ ಒಡವೆಗಳನ್ನು ದೋಚಿದ್ದಾರೆ. ಕಳುವಾದ ವಸ್ತುಗಳಲ್ಲಿ 4 ಗ್ರಾಂ ತೂಕದ ಎರಡು ಚಿನ್ನದ ಹರಳಿನ ಉಂಗುರಗಳು, 8 ಗ್ರಾಂ ತೂಕದ ಒಂದು ಬ್ರೇಸ್ಲೇಟ್ ಹಾಗೂ 40 ಗ್ರಾಂ ತೂಕದ ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದ ಚೈನ್ ಸೇರಿವೆ. ಒಟ್ಟು 56 ಗ್ರಾಂ ತೂಕದ ಆಭರಣಗಳು ನಾಪತ್ತೆಯಾಗಿವೆ.
ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2026, ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 331(3), 331(4) ಮತ್ತು 305 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

