ಉಡುಪಿ: ಸರ್ಕಾರಿ ಜಮೀನಿನಲ್ಲಿ ಕಲ್ಲುಕೋರೆ ಮಾಡಿ ಕೆಂಪುಕಲ್ಲು ಕಳವು ಮಾಡಿದ ಆರೋಪದ ಪ್ರಕರಣದಲ್ಲಿ ರಿಕ್ಷಾ ಚಾಲಕನನ್ನೇ ಆರೋಪಿಯನ್ನಾಗಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಆಲೂರು ಗ್ರಾಮದ ಶೀನ ಪೂಜಾರಿ ವಿರುದ್ಧ ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ತಮ್ಮ ವಿರುದ್ಧದ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಪ್ರಶ್ನಿಸಿ ಶೀನ ಪೂಜಾರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಪೊಲೀಸರಿಗೆ ಸಮರ್ಪಕ ಸಮಜಾಯಿಷಿ ನೀಡಲು ನಾಲ್ಕು ಬಾರಿ ಅವಕಾಶ ನೀಡಿದರೂ ಉತ್ತರ ಸಲ್ಲಿಸದ ಹಿನ್ನೆಲೆಯಲ್ಲಿ, ಆಗಸ್ಟ್ 6ರಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಶೀನ ಪೂಜಾರಿ ವಿರುದ್ಧದ ಆರೋಪಗಳನ್ನು ರದ್ದುಪಡಿಸಿ ಪ್ರಕರಣದಿಂದ ಮುಕ್ತಗೊಳಿಸಿದೆ.
ಇದೀಗ, ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಶೀನ ಪೂಜಾರಿ ಬಯಸಿದರೆ ಕಾನೂನು ಸಹಕಾರ ನೀಡುವುದಾಗಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ತಿಳಿಸಿದೆ.

