ಮಂಗಳೂರು: ಗಣೇಶ ಚತುರ್ಥಿಯಂದು ನಡೆದ ಬೈಕ್–ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.
ಕುತ್ತಾರುವಿನ ಆಯೆರೆ ಬೆಟ್ಟು ನಿವಾಸಿ, 24 ವರ್ಷದ ವರ್ಷಿತ್ ಕುಲಾಲ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ವೈದ್ಯರ ಸಲಹೆಯಂತೆ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಮೂತ್ರಪಿಂಡ, ಯಕೃತ್ತು, ಹೃದಯ ಹಾಗೂ ಶ್ವಾಸಕೋಶಗಳಿಗೆ ಬೇಡಿಕೆ ಬಂದಿದ್ದು, ‘ಝೀರೋ ಟ್ರಾಫಿಕ್’ ವ್ಯವಸ್ಥೆಯ ಮೂಲಕ ಅಂಗಾಂಗಗಳನ್ನು ಸಂಬಂಧಪಟ್ಟ ಆಸ್ಪತ್ರೆಗಳಿಗೆ ರವಾನಿಸುವ ಪ್ರಕ್ರಿಯೆ ನಡೆಯಲಿದೆ.

