ಸದಿಲ್ಲಿ: ರಷ್ಯಾದೊಂದಿಗೆ ಇಂಧನ ವ್ಯವಹಾರ ನಡೆಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಮೂಲಕ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸಲು ಅಮೆರಿಕ ಮುಂದಾಗಿರುವ ಹಿನ್ನೆಲೆಯಲ್ಲಿ, ರಷ್ಯಾದಿಂದ ಕಚ್ಚಾ ತೈಲ ಖರೀದಿ ಕುರಿತು ಭಾರತ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ರಷ್ಯಾದಿಂದ ತೈಲ ಆಮದನ್ನು ತಕ್ಷಣವೇ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
‘ಬಿಸಿನೆಸ್ ಚೇಂಜ್ಮೇಕರ್ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ತಕ್ಷಣ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಏಕಾಏಕಿ ತೈಲ ಪೂರೈಕೆದಾರರನ್ನು ಬದಲಾಯಿಸುವುದೂ ಸಾಧ್ಯವಿಲ್ಲ. ದೇಶದ ಸುಮಾರು 140 ಕೋಟಿ ಜನರ ಇಂಧನ ಅಗತ್ಯಗಳನ್ನು ಪೂರೈಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಹಠಾತ್ತನೆ ಸ್ಥಗಿತಗೊಳಿಸಿದರೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ನಿರ್ಬಂಧಗಳು ಹಾಗೂ ಹೊಸ ನೀತಿಗಳಿಂದ ಭಾರತಕ್ಕೆ ಸವಾಲುಗಳು ಎದುರಾಗಬಹುದು. ಆದರೆ, ಇಂತಹ ಪರಿಸ್ಥಿತಿಯಲ್ಲೂ ದೇಶದ 140 ಕೋಟಿ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ತೈಲ ಪೂರೈಕೆ ಮೇಲೂ ಪರಿಣಾಮ
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಹಾಗೂ ಗಲ್ಫ್ ಪ್ರದೇಶಕ್ಕೆ ಸಂಬಂಧಿಸಿದ ಕೆಲವು ಸಂಸ್ಕರಣಾಗಾರಗಳಲ್ಲಿನ ಅಡಚಣೆಗಳಿಂದ ಜಾಗತಿಕ ತೈಲ ಪೂರೈಕೆ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಪ್ರಮುಖ ತೈಲ ಪೂರೈಕೆದಾರರಿಂದ ಹಠಾತ್ತನೆ ದೂರ ಸರಿದರೆ ಜಾಗತಿಕ ಮಾರುಕಟ್ಟೆಯ ಸಮತೋಲನದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತದಲ್ಲಿನ ಸಂಸ್ಕರಣಾಗಾರಗಳು ಸಣ್ಣ ಬದಲಾವಣೆಗಳ ನಂತರವೂ ಪರ್ಯಾಯ ಮೂಲಗಳಿಂದ ದೊರೆಯುವ ತೈಲವನ್ನು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗದಿದ್ದರೆ, ಬೇರೆಡೆ ತೈಲ ಲಭ್ಯವಿದ್ದರೂ ಅದರ ಪ್ರಯೋಜನ ಭಾರತಕ್ಕೆ ಸಿಗುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ದೇಶದ ಇಂಧನ ಭದ್ರತೆ, ತೈಲ ಪೂರೈಕೆಯ ಸ್ಥಿರತೆ ಹಾಗೂ ಗ್ರಾಹಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

