ಕೋಟ: ಮಗನೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಆಯತಪ್ಪಿ ರಸ್ತೆ ಮೇಲೆ ಬಿದ್ದು ಗಾಯಗೊಂಡ ಘಟನೆ ಶಿರಿಯಾರ ಗ್ರಾಮದ ಮಂದಾರ್ತಿ–ಸೈಬ್ರಕಟ್ಟೆ ರಸ್ತೆಯಲ್ಲಿ ನಡೆದಿದೆ.
ಶಿರಿಯಾರ ಗ್ರಾಮದ ಗಿರಿಜಾ ಅವರು ಸೆ.29ರಂದು ಬೆಳಿಗ್ಗೆ ಸುಮಾರು 8.30ಕ್ಕೆ ತಮ್ಮ ಮಗ ಕಿರಣ ಅವರ ಸ್ಕೂಟರ್ (KA-20-HK-3338)ನಲ್ಲಿ ಮನೆಯಿಂದ ಶಿರಿಯಾರ ಸೊಸೈಟಿಗೆ ತೆರಳುತ್ತಿದ್ದರು. ಈ ವೇಳೆ ಮಂದಾರ್ತಿ–ಸೈಬ್ರಕಟ್ಟೆ ರಸ್ತೆಯಲ್ಲಿ ಸ್ಕೂಟರ್ ಚಲಿಸುತ್ತಿದ್ದಾಗ, ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದಾಗಿ ಹಿಂಬದಿ ಸವಾರಳಾಗಿ ಕುಳಿತಿದ್ದ ಗಿರಿಜಾ ಅವರು ಆಯತಪ್ಪಿ ಹಿಮ್ಮುಖವಾಗಿ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಗಿರಿಜಾ ಅವರನ್ನು ಚಿಕಿತ್ಸೆಗಾಗಿ ಕುಂದಾಪುರ ಸರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಮತ್ತು 125(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

