ಉಡುಪಿ : ಕೆಎಸ್ಸಾರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ನಲ್ಲಿದ್ದ ನಗ ನಗದು ಸಹಿತ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಮೂಡ ಗ್ರಾಮದ ಗೀತಾ ಬಾಯಿ (59) ಅವರು ಮಂಗಳೂರಿಗೆ ಹೋಗಲು ಉಡುಪಿಯ ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿನಲ್ಲಿ ಕುಳಿತಿದ್ದು, ಪಕ್ಕದ ಖಾಲಿ ಸೀಟಿನಲ್ಲಿ ಅವರ ತಂಗಿ ಕುಳಿತುಕೊಳ್ಳಲು ವ್ಯಾನಿಟಿ ಬ್ಯಾಗ್ ಅನ್ನು ಇಟ್ಟಿದ್ದರು.
ಆ ವೇಳೆ ಬಸ್ಸಿನಲ್ಲಿ ಸುಮಾರು 30-32 ವರ್ಷ ಪ್ರಾಯದ ಅಪರಿಚಿತ ಮಹಿಳೆ ವ್ಯಾನಿಟಿ ಬ್ಯಾಗ್ ಮೇಲೆ ಬಿದ್ದಂತೆ ನಟನೆ ಮಾಡಿ, ಸೀಟಿನ ಕೆಳಭಾಗದಲ್ಲಿ ಕುಳಿತಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದರು. ಬಸ್ ಕಟಪಾಡಿ ದಾಟಿದ ಅನಂತರ ಬ್ಯಾಗ್ ಅನ್ನು ತೆರೆದು ನೋಡಿದಾಗ ಅದರಲ್ಲಿದ್ದ ಪರ್ಸ್ ಕಳವಾಗಿರುವುದು ಕಂಡುಬಂದಿತ್ತು.
ಬ್ಯಾಗ್ ನಲ್ಲಿ 40,000 ರೂ. ನಗದು, 1 ಜೊತೆ ಹಳೆಯ ಚಿನ್ನದ ಬೆಂಡೋಲೆ, ಕಲ್ಲಿನ ಚಿನ್ನದ ಮೂಗುಬೊಟ್ಟು ಹಾಗೂ 10,000 ರೂ. ಮೌಲ್ಯದ ಓಮನ್ ದೇಶದ ರಿಯಾಲ್ ಕರೆನ್ಸಿ ನೋಟುಗಳಿದ್ದವು. ಕಂಡಕ್ಟರ್ ಬಳಿ ವಿಚಾರಿಸಿದಾಗ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಉಡುಪಿ ಹಳೆ ತಾಲೂಕು ಕಚೇರಿ ಬಳಿ ಬಸ್ಸಿನಿಂದ ಇಳಿದು ಹೋಗಿರುವುದಾಗಿ ತಿಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಬಸ್ಸಿನಿಂದ ಇಳಿದ ಮಹಿಳೆಯರೇ ಬ್ಯಾಗ್ ಕಳವು ಮಾಡಿರುವ ಬಗ್ಗೆ ಶಂಕಿಸಲಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

