ಉಡುಪಿ : ಸರ್ವಿಸ್ ಬಸ್ ನಿಲ್ದಾಣದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನ ಅನುಮಾನಾಸ್ಪದ ಚಲನವಲನ ಗಮನಿಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರಿದ್ದಾರೆ.
ರಕ್ಷಿಸಲ್ಪಟ್ಟ ಬಾಲಕ ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ಆಶ್ರಯದಲ್ಲಿದ್ದ. ನಿಟ್ಟೂರಿನ ಅನುದಾನಿತ ಹಿ.ಪ್ರಾ.ಶಾಲೆಯ 3ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಮಕ್ಕಳ ರಕ್ಷಣ ಘಟಕದ ಚಕ್ರತೀರ್ಥ, ಪ್ರಮೋದ್, ರಾಜೇಶ್ ಹಸ್ತಾಂತರ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.
ಶಾಲೆಗೆಂದು ತೆರಳಿದ್ದ ಬಾಲಕ ನಾಪತ್ತೆಯಾಗಿದ್ದ ಬಗ್ಗೆ ಬಾಲಕರ ಭವನದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಲಕ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಲ್ಲಿ ಹಣಯಾಚಿಸುತ್ತಿದ್ದ ಸಂದರ್ಭ ಅನುಮಾನ ವ್ಯಕ್ತವಾಗಿತ್ತು. ಹಣ ಸಂಗ್ರಹಗೊಂಡ ಬಳಿಕ ಬಾಲಕ ಬಸ್ಸಿನಲ್ಲಿ ಬೇರೆ ಊರಿಗೆ ಪಲಾಯನಗೈಯುವ ಉದ್ದೇಶ ಹೊಂದಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

