ಉಡುಪಿ : ಜಿಲ್ಲಾದ್ಯಂತ ಮಾದಕ ವಸ್ತು ಸಾಗಾಟ/ಮಾರಾಟ ಮತ್ತು ಸೇವನೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಹಲವು ಪ್ರಯತ್ನಗಳು ನಡೆಯುತ್ತಿದ್ದರೂ ಕಳ್ಳದಾರಿಯಲ್ಲಿ ಸಾಗಾಟ ಮತ್ತು ನಿರ್ಜನ ಪ್ರದೇಶಗಳಲ್ಲಿ ಸೇವನೆ ಹೆಚ್ಚಾಗಿರುವುದು ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಮಾದಕವಸ್ತು ಮಾರಾಟ/ ಸಾಗಾಟಕ್ಕೆ ಸಂಬಂಧಿಸಿದಂತೆ 28 ಪ್ರಕರಣಗಳು, ಸೇವನೆಗೆ ಸಂಬಂಧಿಸಿ 223 ಪ್ರಕರಣ ದಾಖಲಾಗಿದೆ.
ಸಾಗಾಟ ಪ್ರಕರಣದಲ್ಲಿ 11 ವಿದ್ಯಾರ್ಥಿಗಳು ಹಾಗೂ ಸೇವನೆ ಪ್ರಕರಣದಲ್ಲಿ 145 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.
ಕಾಲೇಜು ಕ್ಯಾಂಪಸ್ಗಳಿಗೆ ಡ್ರಗ್ಸ್ ಪೂರೈಕೆ ಮಾಡುವ ವ್ಯವಸ್ಥಿತ ಜಾಲವನ್ನು ಈ ಹಿಂದೆ ಪೊಲೀಸ್ ಇಲಾಖೆ ಪತ್ತೆ ಹಚ್ಚಿತ್ತು. ಶಾಲಾ ಕಾಲೇಜು ಆವರಣದಲ್ಲಿ ಧೂಮಪಾನ, ಮದ್ಯಪಾನ ಮಾರಾಟ, ಸೇವನೆ ನಿಷೇಧವಿದ್ದರೂ ಈ ಜಾಲ ಸಕ್ರಿಯವಾಗಿರುವುದು ಸ್ಪಷ್ಟವಾಗಿದೆ.
ಪೊಲೀಸ್ ಇಲಾಖೆಯಿಂದ ಡ್ರಗ್ಸ್ ತಡೆಗೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಂಚೆ ಕಚೇರಿ, ಕೊರಿಯರ್ ಸೆಂಟರ್, ರೈಲ್ವೇ ನಿಲ್ದಾಣಗಳಲ್ಲಿ ಬರುವ ಅನಾಮಿಕ ಪಾರ್ಸೆಲ್ಗಳ ಮೇಲೆ ವಿಶೇಷ ನಿಗಾ ಇರಿಸಲಾಗುತ್ತಿದೆ. ಅಂಚೆ ಇಲಾಖೆ, ಕೊರಿಯರ್ ಸೆಂಟರ್ಗಳಿಂದ ನಿರಂತರ ಮಾಹಿತಿಯನ್ನು ಇಲಾಖೆಯಿಂದ ಪಡೆಯಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

