ಉಡುಪಿ : ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ಒಟ್ಟು 11 ಕಾಲರ ಪ್ರಕರಣ ವರದಿಯಾಗಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇದ್ದು, ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಕಾಲರಾ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆ ಹಾಗೂ ಡೆಂಗ್ಯೂ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಾರ್ಕಳದ ಈದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 5 ಪ್ರಕರಣಗಳು ಕಂಡುಬಂದಿದ್ದು, ಮಲ್ಪೆ, ಶಿರ್ವ, ಕಾಪು, ಕೆಮ್ಮಣ್ಣು ವಾಂತಿ ಬೇಧಿ ಪ್ರಕರಣಗಳು ಕಂಡುಬಂದು ಕಾಲರಾ ರೋಗ ಎಂದು ವರದಿ ಬಂದಿದೆ. ಸಾರ್ವಜನಿಕರು ಕಾಲರಾ ರೋಗದ ಬಗ್ಗೆ ಮುಂಜಾಗೃತೆ ವಹಿಸಬೇಕು ಎಂದರು.
ಹೋಟೆಲ್, ರೆಸ್ಟೋರೆಂಟ್ ನಲ್ಲಿ ಜನರಿಗೆ ಕುಡಿಯಲು ಬಿಸಿ ನೀರನ್ನು ನೀಡಬೇಕು. ಹೋಟೆಲ್ಗಳಲ್ಲಿ ಬಳಸುವ ಲೋಟ, ತಟ್ಟೆ ಹಾಗೂ ಪಾತ್ರೆಗಳನ್ನು ಸಹ ಬಿಸಿ ನೀರಿನಲ್ಲಿ ತೊಳೆಯಬೇಕು. ಯಾವುದೇ ಸಮುದ್ರದ ಉತ್ಪನ್ನಗಳನ್ನು ಮುಟ್ಟಿದಾಗ ಸರಿಯಾಗಿ ಕೈತೊಳೆದು ಆಹಾರ ಪದಾರ್ಥ ಮುಟ್ಟುವುದು ಸೂಕ್ತ ಎಂದರು.ಸಾರ್ವಜನಿಕರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು, ತಳ್ಳು ಗಾಡಿಯಲ್ಲಿ ಮಾರಾಟ ಮಾಡುವ ಆಹಾರ ಹಾಗೂ ಹಣ್ಣುಗಳನ್ನು ಸೇವಿಸಬಾರದು.
ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಉತ್ಪನ್ನ ಬಳಸುವ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕಳೆದ ಸೆ.14 ರಿಂದ ಅ.2 ರವರೆಗೆ ಸ್ವಚ್ಚತಾ ಸೇವಾ ಅಭಿಯಾನವನ್ನು ಅಂದೋಲನದ ರೀತಿಯಲ್ಲಿ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವತ್ಛವಾಗಿ ಇಟ್ಟುಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳು ಬಸ್ ನಿಲ್ದಾಣ ರೈಲ್ವೆ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಲ್ಲಿ ನೈರ್ಮಲ್ಯವನ್ನು ಕಾಪಾಡಲು ಹೆಚ್ಚಿನ ಆದ್ಯತೆ ವಹಿಸಬೇಕು ಎಂದು ಸೂಚನೆ ನೀಡಿದರು.
ಎಂಐಟಿ ವತಿಯಿಂದ ಗರ್ಭಿಣಿ ಮಹಿಳೆಯರ ಆರೋಗ್ಯ ಸುಧಾರಣೆ ಕುರಿತು ಮಾಹಿತಿಗಳನ್ನು ಕ್ರೋಢಿಕರಿಸುವ ಜನನಿ ಆ್ಯಪ್ನ್ನು ಸೃಜನಿಸಿದ್ದು ಇದರ ಪ್ರಾತ್ಯಕ್ಷಿಕೆ ಸಭೆಯಲ್ಲಿ ಪ್ರದರ್ಶಿಸಿ ಸಾಧಕ ಭಾದಕ ಚರ್ಚಿಸಲಾಯಿತು.
ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಎಂಐಟಿ ನಿರ್ದೇಶಕ ಡಾ. ಅನಿಲ್ ರಾಣಾ, ಎಂಐಟಿ ಉಪನಿರ್ದೇಶಕ ಸೋಮಶೇಖರ ಭಟ್, ಡಿಎಚ್ಒ ಡಾ. ಐ.ಪಿ ಗಡಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಪೌರಾಯುಕ್ತ ರಾಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

