ಬೆಂಗಳೂರು : ಗ್ರಾಮ ಆಡಳಿತ ಅಧಿಕಾರಿ (1 ಸಾವಿರ ಹುದ್ದೆ) ಹಾಗೂ ಜಿಟಿಟಿಸಿ (98 ಹುದ್ದೆ)ಯ ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೆ. 29ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸುತ್ತಿದ್ದು, ಬಿಗಿ ಕ್ರಮಗಳನ್ನು ಕೈಗೊಂಡಿದೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ 5.75 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯದ 1,410 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ನಿನ್ನೆ ಸಂಜೆವರೆಗೆ 4.8 ಲಕ್ಷ ಮಂದಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಿದ್ದಾರೆ. ರವಿವಾರ ನಡೆಯುವ 150 ಅಂಕಗಳ ಕನ್ನಡ ಕಡ್ಡಾಯ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅ.27 ರಂದು ನಡೆಯುವ ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ. ಈ ಪರೀಕ್ಷೆಗೆ ಗೈರಾದವರು ಕೂಡ ಅರ್ಹರಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಯೋಮಿತಿ ಸಡಿಲಿಕೆಯ ಅನುಕೂಲ ಪಡೆಯುವವರ ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅ. 26ರಂದು ಕನ್ನಡ ಕಡ್ಡಾಯ ಪರೀಕ್ಷೆ ಇರುತ್ತದೆ. ಅದರ ಅನಂತರ ಅವರು ಅ. 27ರಂದು ನಡೆಯುವ ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

