ಉಡುಪಿ-ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಈ ವರ್ಷದ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 25 ಕಳ್ಳತನ ಪ್ರಕರಣಗಳು ನಡೆದಿವೆ.
ಅಂಗಡಿಗೆ ನುಗ್ಗಿ ಕಳ್ಳತನ, ಮನೆಕಳವು, ಅಪಾರ್ಟ್ಮೆಂಟ್ಗೆ ನುಗ್ಗಿ ಕಳವು, ಚಿನ್ನ ಕಸಿದು ಪರಾರಿ ಹೀಗೆ ಭಿನ್ನ ಭಿನ್ನ ಮಾದರಿಯ ಲೂಟಿ ನಡೆದಿದೆ.
ರವಿವಾರ ತಡರಾತ್ರಿ ಉಡುಪಿ ನಗರ ಠಾಣೆಯ ಸಮೀಪವೇ ನಡೆದ ಕಳ್ಳತನ ಪ್ರಕರಣ ನಿಜಕ್ಕೂ ಜನರನ್ನು ಬೆಚ್ಚಿಬೀಳಿಸಿದೆ. ಈ ಹಿಂದೆ ಬ್ರಹ್ಮಗಿರಿಯ ಅಪಾರ್ಟ್ಮೆಂಟ್ಗೆ ನಾಲ್ಕೈದು ಮಂದಿ ಮುಸುಕುಧಾರಿಗಳು ಕಳವು ಮಾಡಲು ಬಂದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದರೆ, ಅವರು ಮುಂದೆಲ್ಲಿ ಹೋದರು ಎಂಬ ಸುಳಿವಿಲ್ಲ. ಈಗ ಪರಿಸ್ಥಿತಿ ಎಲ್ಲಿವರೆಗೆ ಬಂದಿದೆ ಎಂದರೆ ಒಂಟಿ ಮನೆಗಳು ಬಿಡಿ ಅಪಾರ್ಟ್ಮೆಂಟ್ಗಳೂ ಸೇಫಲ್ಲ ಎಂಬಂತಾಗಿದೆ.
ಕಳ್ಳರ ಪತ್ತೆಗೆ ಪೊಲೀಸರು ಈಗಾಗಲೇ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

