ಪಣಜಿ : ಗೋವಾದ ಕಡಲ ಗಡಿಗೆ ಅಕ್ರಮವಾಗಿ ನುಗ್ಗಿ ಬುಲ್ ಟ್ರಾಲಿಂಗ್ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಮಲ್ಪೆಯ ಎರಡು ಮೀನುಗಾರಿಕಾ ಬೋಟ್ ಗಳನ್ನು ಗೋವಾ ರಾಜ್ಯ ಮೀನುಗಾರಿಕೆ ಇಲಾಖೆ ವಶಪಡಿಸಿಕೊಂಡಿದೆ.
ಈ ಕಾರ್ಯಾಚರಣೆಯಲ್ಲಿ ಕರಾವಳಿ ಪೊಲೀಸರು ಮತ್ತು ಸ್ಥಳೀಯ ಮೀನುಗಾರರು ಪಾಲ್ಗೊಂಡಿದ್ದರು.
ವಶಪಡಿಸಿಕೊಂಡ ಬೋಟ್ ಗಳಲ್ಲಿದ್ದ ಮೀನುಗಳನ್ನು ಹರಾಜು ಹಾಕಿ ಬೋಟ್ ಮಾಲಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಗೋವಾ ರಾಜ್ಯ ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಕರ್ನಾಟಕದ ಮಲ್ಪೆ ಮೀನುಗಾರಿಕಾ ಬೋಟ್ಗಳ ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದು, ಕಾರ್ಯಾಚರಣೆ ವೇಳೆ ಇನ್ನೆರಡು ಬೋಟ್ಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದೆ ಎಂದು ಗೋವಾ ಮೀನುಗಾರಿಕಾ ಇಲಾಖೆ ಮಾಹಿತಿ ನೀಡಿದೆ.
ವಶಪಡಿಸಿಕೊಂಡ ಮೀನುಗಾರಿಕಾ ಬೋಟ್ಗಳ ಪಣಜಿ ಜೆಟ್ಟಿಗೆ ತರಲಾಗಿದೆ. ಅಕ್ರಮ ಒಳ ನುಸುಳುವಿಕೆಯ ವಿರುದ್ಧ ಇದೇ ರೀತಿ ಕ್ರಮ ಮುಂದುವರಿಯಲಿದೆ ಎಂದು ಸಚಿವ ಹಳರ್ಣಕರ್ ಮಾಹಿತಿ ನೀಡಿದ್ದಾರೆ.

