ಕುಂದಾಪುರ : ತಿರುಪತಿ ಮತ್ತು ಉಡುಪಿ ಕುಂದಾಪುರ ನಡುವೆ ನೇರ ರೈಲು ಸೇವೆ ಬೇಕು ಎನ್ನುವ ದಶಕಗಳ ಕನಸು ಉಡುಪಿ ಸಂಸದರ ಅವಿರತ ಪ್ರಯತ್ನದಿಂದ ನನಸಾಗಿದ್ದು, ಹೈದರಾಬಾದ್ ಮಹಾನಗರಿಯ ಜತೆಯೂ ಈ ಮೂಲಕ ರೈಲು ಸೇವೆ ಆರಂಭವಾಗಿದೆ.
ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತಿದ್ದ ಕಾಚಿಗುಡ ಮಂಗಳೂರು ವಾರಕ್ಕೆರಡು ದಿನದ ರೈಲನ್ನು ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡುವ ಸಂಸದರ ಕೋರಿಕೆಯನ್ನು ಮನ್ನಿಸಿ ಭಾರತೀಯ ರೈಲ್ವೆ ವಿಸ್ತರಣೆಗೆ ಆದೇಶ ಮಾಡಿದೆ.
ಬುಧವಾರ ಮತ್ತು ಶನಿವಾರ ಸಂಜೆ 5ಕ್ಕೆ ಕುಂದಾಪುರ ಉಡುಪಿ ಮಾರ್ಗದ ಮೂಲಕ ಹೊರಡುವ ರೈಲು ಮರುದಿನ ಬೆಳಿಗ್ಗೆ 11ಗಂಟೆಗೆ ತಿರುಪತಿ ಬಳಿಯ ರೇಣಿಗುಂಟ ನಿಲ್ದಾಣದ ಮೂಲಕ ಹೈದರಾಬಾದಿನ ಕಾಚಿಗುಡ ತಲುಪಲಿದೆ.ಕಳೆದ ಒಂದು ದಶಕದಿಂದ ಕುಂದಾಪುರ ರೈಲು ಸಮಿತಿಯು ಈ ಬಗ್ಗೆ ನಿರಂತರ ಪ್ರಯತ್ನಿಸುತಿದ್ದ ಹಿನ್ನೆಲೆಯಲ್ಲಿ ಸಂಸದನಾಗಿ ಆಯ್ಕೆಯಾದ ಮೊದಲ ನೂರು ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಈ ಮಹತ್ವಾಕಾಂಕ್ಷೆಯ ರೈಲು ಸೇವೆಯ ಗುರಿಯನ್ನು ಹೊಂದಿರುವುದಾಗಿ ಸಂಸದರು ತಿಳಿಸಿದ್ದರು.
ಅದರಂತೆ ಮುರುಡೇಶ್ವರದ ಮೂಲಕ ಕುಂದಾಪುರ ಉಡುಪಿ ಸುರತ್ಕಲ್ ಮೂಲ್ಕಿ ನಗರಗಳು ಕೊಯಂಬತ್ತೂರು , ತಿರುಪತಿ, ಮಂತ್ರಾಲಯ ಸಮಿಪದ ದೊನೆ ಜಂಕ್ಷನ್ ಸೇರಿದಂತೆ ಹೈದರಾಬಾದ್ ವರೆಗೆ ರೈಲು ಸಂಪರ್ಕ ಪಡೆದಿವೆ. ವಿಜಯ ದಶಮಿಯ ಶುಭ ಸಂದರ್ಭದಲ್ಲಿ ಕರಾವಳಿಗೆ ಘೊಷಣೆಯಾಗಬೇಕು ಎನ್ನುವ ಕಾರಣಕ್ಕೆ ಸಂಸದರು ಸತತವಾಗಿ ದೆಹಲಿಯ ಅದಿಕಾರಿಗಳ ಜತೆ ಸಭೆಯ ಮೇಲೆ ಸಭೆ ನಡೆಸಿದ ಪರಿಣಾಮ ವಿಜಯದಶಮಿಯ ಪಾವನ ಸಂದರ್ಭದಲ್ಲಿ ಈ ರೈಲಿನ ವಿಸ್ತರಣೆಗೆ ಆದೇಶವು ಕರಾವಳಿಗೆ ಬಂದಿದೆ.
ಕರಾವಳಿಯ ಪ್ರತೀ ಮನೆಯಿಂದಲೂ ತಿರುಪತಿ ತೆರಳುವ ಅಸಂಖ್ಯಾತ ಭಕ್ತವರ್ಗವಿದ್ದು, ರೈಲಿನ ಅಲಭ್ಯತೆಯ ಕಾರಣದಿಂದ ಬಸ್ ಅಥವಾ ಬೆಂಗಳೂರು ತಲುಪಿ ಅಲ್ಲಿಂದ ಪ್ರಯಾಣ ಮಾಡ ಬೇಕಾದ ಪರಿಸ್ಥಿತಿಯಲ್ಲಿದ್ದರು.
ಸ್ವಾತಂತ್ರ್ಯದ 76 ವರ್ಷಗಳ ಬಳಿಕ ದಕ್ಷಿಣದ ಎಲ್ಲಾ ರಾಜ್ಯಗಳ ಜತೆ ಕೊಂಕಣ ರೈಲ್ವೆ ಮೂಲಕ ರೈಲು ಸಂಪರ್ಕ ಲಭೀಸಿದ್ದು, ಪುಣ್ಯಕ್ಷೇತ್ರ ತಿರುಪತಿಯನ್ನು ಉಡುಪಿ ಶ್ರೀಕೃಷ್ಣ ,ಕೊಲ್ಲೂರು ಮೂಕಾಂಬಿಕಾ ದೇಗುಲದ ಮೂಲಕ ಮುರುಡೇಶ್ವರದವರೆಗೆ ವಿವಿಧ ಪುಣ್ಯಸ್ಥಳಗಳಿಗೆ ರೈಲು ಸಿಕ್ಕಂತಾಗಿದೆ ಎಂದು ಸಂಸದ ಶ್ರೀನಿವಾಸ್ ಪೂಜಾರಿ ಹರ್ಷ ವ್ಯಕ್ತ ಪಡಿಸಿದ್ದಾರೆ.

