ಉಳ್ಳಾಲ : ಉಚ್ಚಿಲ ಬಟ್ಟಪ್ಪಾಡಿಯಲ್ಲಿ ತಿಂಗಳುಗಳ ಹಿಂದೆ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೋರ್ವರಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಚಾಕುವಿನಿಂದ ಇರಿಯಲು ಯತ್ನಿಸಿರುವ ಘಟನೆ ಸೋಮೇಶ್ವರ ಪುರಸಭೆಯ ಕಚೇರಿಯ ಬಳಿ ನಡೆದಿದೆ.
ಸೋಮೇಶ್ವರ ಉಚ್ಚಿಲದ, ಫಿಶರೀಶ್ ರೋಡ್ ನಿವಾಸಿಯಾದ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್ ಎಮ್ ಉಚ್ಚಿಲ (53) ಹಲ್ಲೆಗೊಳಗಾದ ವ್ಯಕ್ತಿ.
ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸುನಿಲ್ ಪೂಜಾರಿ ಎಂಬುವವರು ಹಲ್ಲೆಗೈದಿದ್ದು, ಹಲ್ಲೆಗೊಳಗಾದ ಕಿಶೋರ್ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಹಲ್ಲೆಗೊಳಗಾದ ಕಿಶೋರ್ ತನ್ನ ಸ್ನೇಹಿತ ಪುಷ್ಪರಾಜ್ ಜೊತೆಯಲ್ಲಿ ಸೋಮೇಶ್ವರದ ಹೊಟೇಲ್ ನಲ್ಲಿ ಚಹಾ ಕುಡಿದು ಸ್ಕೂಟರ್ ನಲ್ಲಿ ಸಹ ಸವಾರನಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆಯಲ್ಲಿ ಸೋಮೇಶ್ವರ ಪುರಸಭಾ ಕಚೇರಿ ಬಳಿ ಸುನಿಲ್ ಪೂಜಾರಿ ಸ್ಕೂಟರ್ ನ್ನು ತಡೆದು ಮರಳುಗಾರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೀಯ? ಎಂದು ಕೊಲೆ ಬೆದರಿಕೆ ಹಾಕಿ, ಭುಜ ಮತ್ತು ಸೊಂಟಕ್ಕೆ ಹಲ್ಲೆಗೈದಿದ್ದಾನೆ. ಆ ಬಳಿಕ ಚಾಕು ಹೊರ ತೆಗೆದು ಇರಿಯಲು ಮುಂದಾಗಿದ್ದು, ಈ ವೇಳೆ ಸ್ನೇಹಿತ ಪುಷ್ಪರಾಜ್ ಸ್ಕೂಟರನ್ನು ವೇಗವಾಗಿ ಚಲಾಯಿಸಿದರ ಪರಿಣಾಮವಾಗಿ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಹಲ್ಲೆಗೊಳಗಾದ ಕಿಶೋರ್ ದೂರಿನಲ್ಲಿ ವಿವರಿಸಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಹಲ್ಲೆಗೊಳಗಾದ ಕಿಶೋರ್, ಆರೋಪಿ ಸುನಿಲ್ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

