ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕಾರಿನ ಮೇಲೆ ದಾಳಿ ನಡೆದಿದ್ದು, ಈ ಘಟನೆಯನ್ನು ಹಿಂದೂ ಐಕ್ಯ ವೇದಿಕೆ, ಮಧೂರು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ, ದಕ್ಷಿಣ ಕನ್ನಡ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವರು ಖಂಡಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ ವಾಹನವನ್ನು ತಡೆದ ಪುಂಡರ ತಂಡವೊಂದು ತಗಾದೆ ಎಬ್ಬಿಸಿತ್ತು. ಇದೇ ದಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ಬರುವಾಗ ಇರಿಯಣ್ಣಿಯಿಂದಲೇ ಹಿಂಬಾಲಿಸಿದ ಬಂದು ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದರೆಂದೂ, ಕಾರಿನ ಗಾಜಿಗೆ ಹಾನಿಯಾಗಿದೆಯೆಂದೂ ತಿಳಿದುಬಂದಿದೆ.
ಈ ಸಂದರ್ಭ ಸ್ವಾಮೀಜಿಯವರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದಿದ್ದಾರೆ.
ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಎಡನೀರು ಸಂಸ್ಥಾನದ ಸ್ವಾಮೀಜಿಗಳ ವಾಹನದ ಮೇಲಾದ ದಾಳಿಯನ್ನು ಖಂಡಿಸುತ್ತಾ, ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕೇರಳ ಸರ್ಕಾರ ನೀಡಬೇಕೆಂದು ಅರುಣ್ ಪುತ್ತಿಲ ಒತ್ತಾಯಿಸಿದ್ದಾರೆ.
ಹಲವರು ಪ್ರಮುಖರು ಘಟನೆಯನ್ನು ಖಂಡಿಸಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

