ಯಾವುದೇ ವ್ಯಕ್ತಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳನ್ನು ಎದುರಾದರೆ, ಇದ್ದಕ್ಕಿದ್ದಂತೆ ವ್ಯವಹಾರವು ನಿಂತುಹೋಗುವುದಾಗಲಿ, ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುವುದಾಗಲಿ, ಆರೋಗ್ಯ ಸಮಸ್ಯೆ ಬಂದಾಗ ಯಾರ ಕೆಟ್ಟ ದೃಷ್ಟಿ ಬಿತ್ತೊ? ಎಂದು ಜನರು ಮಾತನಾಡುವುದನ್ನು ನಾವು ಕೇಳುತ್ತಿರುತ್ತೇವೆ. ಇದಕ್ಕಿರುವ ಹಿಂದಿನ ಕಾರಣಗಳೇನು? ದೃಷ್ಟಿ ದೋಷಕ್ಕೆ ಪರಿಹಾರಗಳೇನು ಎಂದು ತಿಳಿದುಕೊಳೋಣ.
ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ, ಯಾರಿಗಾದರೂ ಕೆಟ್ಟ ದೃಷ್ಟಿ ಬಿದ್ದರೆ, ಅವರು ಜೀವನದಲ್ಲಿ ಹಲಾವಾರು ರೀತಿಯ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ.
- ವ್ಯವಹಾರದ ಮೇಲೆ ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಿದೆ ಎಂದು ನಿಮಗೆ ಭಾಸವಾದರೆ, ನೀವು ನಿಮ್ಮ ಕೆಲಸದ ಸ್ಥಳದ ಮುಖ್ಯ ಬಾಗಿಲಿನ ಮೇಲೆ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತುಹಾಕಬಹುದು. ಹೀಗೆ ಒಂದು ನಿಂಬೆ ಮತ್ತು 5 ಹಸಿರು ಮೆಣಸಿನಕಾಯಿಯನ್ನು ನೇತುಹಾಕುವುದರಿಂದ ದೃಷ್ಟಿ ದೋಷದ ಜೊತೆಗೆ ವಾಸ್ತು ದೋಷಗಳೂ ನಿವಾರಣೆಯಾಗುತ್ತದೆ ಎಂಬುದು ನಂಬಿಕೆ. ಇದನ್ನು ಮಂಗಳವಾರದಂದು ಮಾಡಬಹುದಾಗಿದೆ.
- ಕೆಟ್ಟ ದೃಷ್ಟಿ ನಿವಾರಣೆಗೆ ಜೀರಿಗೆ ಅತ್ಯುತ್ತಮ ಸಂರಕ್ಷಕವಾಗಿರುತ್ತದೆ. ಸ್ವಲ್ಪ ಪ್ರಮಾಣದ ಜೀರಿಗೆ ನಿವಾಳಿಸಬುದು ಮತ್ತು ಇದನ್ನು ಸೇವಿಸುವುದು ಕೂಡ ಉತ್ತಮ ಫಲಿತಾಂಶ ನೀಡುತ್ತದೆ.
- ಧೂಪಗಳನ್ನು ಮನೆಯಲ್ಲಿ ಬೆಳಗಿಸುವುದರಿಂದ ಆ ಪರಿಮಳ ನಿಮ್ಮ ಮನೆ ಮತ್ತು ಕಚೇರಿಯನ್ನು ವ್ಯಾಪಿಸುತ್ತದೆ ಇದು ಪರಿಸರವನ್ನು ಶಾಂತಗೊಳಿಸುವುದರೊಂದಿಗೆ ನಿಮ್ಮ ಜಾಗದಲ್ಲಿ ವ್ಯಾಪಿಸಿರುವ ದುಷ್ಟಶಕ್ತಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ
- ಸುಣ್ಣದ ನೀರಿಗೆ ಅರಿಶಿನ ಹಾಕಿ ದೃಷ್ಟಿ ತೆಗೆದು, ಮೂರು ದಾರಿಯ ಮಧ್ಯೆ ಅದನ್ನು ಸುರಿಯಬೇಕು. ಈ ರೀತಿ ಸುಣ್ಣದ ನೀರಿಗೆ ಅರಿಶಿನ ಹಾಕಿದಾಗ ಅದು ಎಷ್ಟು ಕೆಂಪು ಬಣ್ಣಕ್ಕೆ ತಿರುಗುತ್ತದೆ ಎಂಬುದರ ಮೇಲೆ ಎಷ್ಟು ದೃಷ್ಟಿ ತಗುಲಿದೆ ಎಂದು ನಿರ್ಧಾರಿಸುತ್ತಾರೆ. ಸುಣ್ಣವು ನಂಜುನಿರೋಧಕ ಮತ್ತು ಸೋಂಕುನಿವಾರಕ ಸಾಮರ್ಥ್ಯವನ್ನು ಹೊಂದಿದೆ.
- ಕಲ್ಲು ಉಪ್ಪನ್ನು ತೆಗೆದುಕೊಂಡು ಇದರ ಒಟ್ಟಿಗೆ ಸಾಸಿವೆ, ಉಪ್ಪು, ಮೂರು ಮೆಣಸಿನಕಾಯಿ ಎಲ್ಲವನ್ನೂ ಸೇರಿಸಿ ದೃಷ್ಟಿಯಾಗಿರುವ ವ್ಯಕ್ತಿಯನ್ನು ಪೂರ್ವಾಭಿಮುಖವಾಗಿ ಕುಳಿರಿಸಿ, ಮೂರು ಬಾರಿ, ಮೂರು ಸುತ್ತು ಸುತ್ತಿಸಿ ಅದನ್ನು ಬೆಂಕಿಗೆ ಹಾಕುತ್ತಾರೆ. ಇದನ್ನು ಮಂಗಳವಾರ ಅಥವಾ ಭಾನುವಾರದಂದು ಮಾತ್ರ ಮಾಡಬೇಕು.
- ಮನೆಗೆ ದುಷ್ಟಶಕ್ತಿಗಳ ಪ್ರವೇಶವಾಗದಂತೆ ಮತ್ತು ದುಷ್ಟ ಕಣ್ಣುಗಳಿಂದ ದೂರವಿರಲು ನೀರು ಕುಂಬಳಕಾಯಿಯನ್ನು ಮನೆಯ ಹೊಸ್ತಿಲಲ್ಲಿ ನೇತು ಹಾಕಬಹುದು.
- ಮನೆ ಕಟ್ಟಡಗಳಿಗೆ ಕೆಟ್ಟ ದೃಷ್ಟಿ ತಾಗಬಾರದೆಂದು ಒಣಗಿದ ಹುಲ್ಲಿನಿಂದ ತಯಾರು ಮಾಡಿದ ದೃಷ್ಟಿ ಗೊಂಬೆಯನ್ನು ಎಲ್ಲರ ಕಣ್ಣಿಗೆ ಬೀಳುವಂತೆ ಮನೆಯ ಮುಂದೆ ನೇತು ಹಾಕಬಹುದು.
