ಉಡುಪಿ : ಕಾರಿನ ಮೇಲೆ ಪಟಾಕಿ ಎಸೆದ ಬಗ್ಗೆ ಪ್ರಶ್ನಿಸಿದ ಕಾರಣಕ್ಕೆ ಪ್ರವಾಸಿಗರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ಹೂಡೆ ಬೀಚ್ನಲ್ಲಿ ನಡೆದಿದೆ.
ನಿಟ್ಟೂರಿನ ಅಶ್ವಿನಿ ಶಿವಕುಮಾರ್ ಕುಟುಂಬಸ್ಥರೊಂದಿಗೆ ನ. 2ರಂದು ಸಂಜೆ ಹೂಡೆ ಬೀಚ್ಗೆ ವಿಹಾರಕ್ಕೆಂದು ತೆರಳಿದ್ದರು. ಆಗ ಅವರ ಕಾರಿನ ಮೇಲೆ ಸ್ಥಳೀಯರು ಎರಡು ಬಾರಿ ಪಟಾಕಿಯನ್ನು ಎಸೆದಿದ್ದರು. ಅಶ್ವಿನಿ ಜೊತೆಗಿದ್ದ ರಾಕೇಶ್ ಪಟಾಕಿ ಎಸೆದಿರುವವನ ಬಳಿ ಪ್ರಶ್ನಿಸಿದಾಗ ಸ್ಥಳೀಯರಾದ ಭೋಜ, ರವಿ, ಸಂತೋಷ್, ಚೇತನ್ ಹಾಗೂ 10ರಿಂದ 12 ಮಂದಿ ಸೇರಿಕೊಂಡು ರಾಕೇಶ್ , ರಾಘವ, ಸಂತೋಷ್ ಹಾಗೂ ಪ್ರದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ.
ರಾಕೇಶ್ ಅವರ 4.5 ಲ.ರೂ. ಮೌಲ್ಯದ 4 ಪವನ್ ಚಿನ್ನದ ಚೈನ್ ಹಾಗೂ ಸುಮಾರು 2 ಗ್ರಾಂ ಮೌಲ್ಯದ ಚಿನ್ನದ ಕಿವಿಯೋಲೆ ದೋಚಿದ್ದಾರೆ. ಅಲ್ಲದೆ ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಶ್ವಿನಿ ಮಲ್ಪೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

