ಕುಂದಾಪುರ : ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಗೆ ಬೀಳಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಸಜೆ ವಿಧಿಸಿ ಎಂದು ಆದೇಶ ನೀಡಿದೆ.
ಕುಂದಾಪುರದ ನಿವಾಸಿಯಾದ ಮಿಥುನ್ (21) ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ.
ಈತ 17 ವರ್ಷದ ಬಾಲಕಿಯನ್ನು ಕಾಲೇಜಿಗೆ ತೆರಳುವ ವೇಳೆ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ, 2023ರ ಜನವರಿಯಿಂದ ಆಕೆಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದನು.
ಬಾಲಕಿಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಪೋಷಕರಿಗೆ ಆಕೆ ಗರ್ಭಿಣಿ ಎಂಬುದು ತಿಳಿದು, ಬಂತು. ಸಂತ್ರಸ್ತೆ ಬಾಲಕಿಯ ತಂದೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಇದರ ಬಗ್ಗೆ ದೂರು ದಾಖಸಿದ್ದರು. ಈ ಕುರಿತು ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕರಾದ ನಂದ ಕುಮಾರ್, ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಇದರ ಕುರಿತು ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಒಟ್ಟು ಸಲ್ಲಿಸಲಾದ 30ಸಾಕ್ಷಿಗಳ ಪೈಕಿ 16 ಸಾಕ್ಷಿಗಳ ವಿಚಾರಣೆಯನ್ನು, ವಾದ ಹಾಗೂ ಪ್ರತಿವಾದಗಳನ್ನು ಮತ್ತು ಡಿಎನ್ಎ ಸಾಕ್ಷಿಯನ್ನು ಪರಿಗಣಿಸಿ, ಆರೋಪಿ ದೋಷಿ ಎಂಬುದಾಗಿ ಆದೇಶ ನೀಡಿದರು. ಅದರಂತೆ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 21ಸಾವಿರ ರೂ. ದಂಡ ವಿಧಿಸಿದ್ದಾರೆ.
ಒಟ್ಟು ದಂಡದ ಮೊತ್ತದಲ್ಲಿ 15 ಸಾವಿರ ರೂ. ಬಾಲಕಿಗೆ, 6 ಸಾವಿರ ರೂ. ಸರಕಾರಕ್ಕೆ ಕೊಡುವಂತೆ ಮತ್ತು ನೊಂದ ಬಾಲಕಿಗೆ ಸರಕಾರದಿಂದ 2 ಲಕ್ಷ ರೂ. ಪರಿಹಾರ ಸಿಗುವಂತೆ ಆದೇಶದಲ್ಲಿ ತಿಳಿಸಲಾಗಿದ . ಸರಕಾರದ ಪರವಾಗಿ, ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.

