ಉಡುಪಿ : ಸರಕಾರ ಘೋಷಿಸಿರುವ ಬೆಂಬಲ ಬೆಲೆಯಷ್ಟೇ ದರ ನೀಡಿ ಸ್ಥಳೀಯ ಖಾಸಗಿ ರೈಸ್ ಮಿಲ್ಗಳ ಮಾಲಕರು ರೈತರಿಂದ ಭತ್ತ ಖರೀದಿಸಲು ಮುಂದಾಗಿರುವುದರಿಂದ ಈ ಬಾರಿ ಕರಾವಳಿಯ ರೈತರು ಸರಕಾರದ ಖರೀದಿ ಕೇಂದ್ರಕ್ಕಾಗಿ ಕಾಯುವ ಪರಿಸ್ಥಿತಿ ಇಲ್ಲ.
ಕರಾವಳಿಯುದ್ದಕ್ಕೂ ಭತ್ತ ಕಟಾವು ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯ ಸರಕಾರದಿಂದ ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ ಬಂದಿದ್ದರೂ ಖರೀದಿ ಪ್ರಕ್ರಿಯೆ 2025ರ ಜ. 1ರಿಂದ ಆರಂಭವಾಗುವುದರಿಂದ ರೈತರಿಗೆ ಇದು ಊಟಕ್ಕಿಲ್ಲದ ಉಪ್ಪಿನಕಾಯಿಯೇ ಸರಿ. ಆದರೆ ಜಿಲ್ಲಾಡಳಿತವು ರೈತರು ಹಾಗೂ ರೈಸ್ ಮಿಲ್ ಮಾಲಕರ ನಡುವೆ ನಡೆಸಿದ ಮಾತುಕತೆಯ ಫಲವಾಗಿ ಬೆಂಬಲ ಬೆಲೆಯಷ್ಟೇ ದರದಲ್ಲಿ ಭತ್ತ ಖರೀದಿಗೆ ಮಿಲ್ ಮಾಲಕರು ಒಪ್ಪಿಗೆ ಸೂಚಿಸಿದ್ದು, ರೈತರು ಕೂಡ ಈ ದರಕ್ಕೆ ಭತ್ತ ನೀಡುವ ಸಾಧ್ಯತೆ ಇದೆ.
ಕಳೆದ ಅನೇಕ ವರ್ಷದಿಂದಲೂ ರೈತರು ಭತ್ತ ಮಾರಾಟ ಸಂದರ್ಭದಲ್ಲಿ ಈ ಸಮಸ್ಯೆ ಎದುರಿಸುತ್ತಿದ್ದು ಒಂದು ಕೆ.ಜಿ. ಭತ್ತಕ್ಕೆ 18ರೂ.ಗಳಿಂದ 22 ರೂ.ಗಳವರೆಗೂ ನೀಡಿದ್ದುಂಟು. ಈ ಬಾರಿ ಸರಕಾರ ನಿಗದಿಪಡಿಸಿದಷ್ಟೆ ಬೆಲೆ ಸಿಗುತ್ತಿರುವುದು ಕೊಂಚ ಸಮಾಧಾನ ತರಬಹುದು. ಉಡುಪಿಯಲ್ಲಿ ಸುಮಾರು 36 ಸಾವಿರ ಹೆಕ್ಟೇರ್ ಹಾಗೂ ದಕ್ಷಿಣ ಕನ್ನಡದಲ್ಲಿ ಸುಮಾರು 9,500 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡಲಾಗಿತ್ತು.
ಕೃಷಿ ಇಲಾಖೆಯಿಂದ ಕಟಾವಿಗೆ ಅನುಕೂಲ ಆಗುವಂತೆ ಹೋಬಳಿಗೆ ಒಂದು ಅಥವಾ ಎರಡು ಯಂತ್ರ ಇಡ ಲಾಗಿದೆ. ಇದರ ಬಾಡಿಗೆ ಶುಲ್ಕ ಕಡಿಮೆ. ಗಂಟೆಗೆ 1,700ರಿಂದ 1800 ರೂ.ಗೆ ಲಭಿಸುತ್ತದೆ. ಆದರೆ ಖಾಸಗಿಯವರು 2,400ರಿಂದ 2,500 ರೂ.ಗಳನ್ನು ಗಂಟೆಗೆ ನಿಗದಿ ಮಾಡಿದ್ದಾರೆ. ಯಂತ್ರ ಗಳ ಕೊರತೆ ಇರುವುದರಿಂದ ರೈತರಿಗೆ ದುಬಾರಿ ಬೆಲೆ ತೆತ್ತು ಕಟಾವು ಮಾಡಿಸುವುದು ಅನಿವಾರ್ಯ ಎಂಬಂತಾಗಿದೆ.
ಕೇಂದ್ರ ಸರಕಾರವು ಕ್ವಿಂಟಾಲ್ಗೆ 2,300 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಸರಕಾರದ ಭತ್ತ ಖರೀದಿ ಕೇಂದ್ರದಲ್ಲಿ ಇದೇ ದರದಲ್ಲಿ ಖರೀದಿ ಮಾಡಲಾಗುತ್ತದೆ. ಆದರೆ ರೈತರು ಜನವರಿಯವರೆಗೂ ಕಾಯಬೇಕು ಅಂದರೆ ಸರಿ ಸುಮಾರು 2 ತಿಂಗಳು ಕಾಯಬೇಕು. ಇದಕ್ಕಾಗಿಯೇ ಜಿಲ್ಲಾಡಳಿತ ಈಗಾಗಲೇ ಎರಡು ಬಾರಿ ಜಿಲ್ಲೆಯ ರೈಸ್ ಮಿಲ್ ಮಾಲಕರು ಹಾಗೂ ರೈತರ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿ ಕ್ವಿಂಟಾಲ್ಗೆ 2,300 ರೂ.ಗಳಂತೆ ಖರೀದಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ರೈತರು ಹಾಗೂ ಮಿಲ್ ಮಾಲಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

