ಉಪ್ಪಿನಂಗಡಿ : ದಾರಿ ವಿವಾದಕ್ಕೆ ಸಂಬಂಧಿಸಿದಂತೆ, ಉಂಟಾದ ವೈಷಮ್ಯದಿಂದಾಗಿ ಸಂಬಂಧಿಯನ್ನೇ ಕೊಲೆಗೈದ ಘಟನೆ, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಕೊಲೆಯಾದವರು ಆಲಂತಾಯ ಗ್ರಾಮದ ಪೆರ್ಲದ ನಿವಾಸಿಯಾದ ರಮೇಶ್ ಗೌಡ (51). ಕೊಲೆಗೈದ ಆರೋಪಿ ಹರೀಶ್ ಗೌಡ (38), ಈತ ಕೊಲೆಯಾದ ರಮೇಶ್ ಗೌಡ ಅವರ ಮನೆಯ ಸಮೀಪದ ನಿವಾಸಿ ಮತ್ತು ದೂರದ ಸಂಬಂಧಿಯೂ ಆಗಿದ್ದನು.
ಇವರಿಬ್ಬರ ಮಧ್ಯೆ ದಾರಿಯ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗಿನಿಂದ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ, ಇದು ವಿಕೋಪಕ್ಕೆ ತಿರುಗಿ ಕೊಲೆಗೈಯುವ ಹಂತಕ್ಕೆ ತಲುಪಿದೆ.
ಪೆರ್ಲ ದೇಗುಲದಲ್ಲಿ ಶುಕ್ರವಾರದ ರಾತ್ರಿ ಭಜನ ಸೇವೆಯಲ್ಲಿ ಭಾಗವಹಿಸಲು ರಮೇಶ್ ಗೌಡ ಹೂವುಗಳನ್ನು ಮನೆಯಿಂದ ತರಲು ಬೈಕ್ ನಲ್ಲಿ ಹೊರಟು, ಅಲ್ಲಿಂದ ಸುಮಾರು 50 ಮೀಟರ್ ದೂರ ಕ್ರಮಿಸಿ ಅಲ್ಲಿ ನೋಡುವಾಗ, ಅಲ್ಲಿ ಮೊದಲೇ ಕಾಯುತ್ತ ನಿಂತಿದ್ದ ಹರೀಶ ಗೌಡ, ಹತ್ಯೆಗೈಯ್ಯಲು ಪ್ರಯತ್ನಿಸಿದ್ದಾನೆ ಅದರಿಂದ ತಪ್ಪಿಸಿಕೊಳ್ಳಲು ರಮೇಶ ಬೈಕನ್ನು ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದರಾದರೂ, ಆರೋಪಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆರೋಪಿಯು ರಮೇಶ್ ಗೌಡ ಅವರನ್ನು ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿ ಹತ್ಯೆಗೈದಿದ್ದಾನೆ.
ಮನೆಯ ಸಮೀಪ ಬೈಕ್ ಬಿದ್ದಿದ್ದರೆ, ಬೈಕಿನಿಂದ ಸುಮಾರು 200 ಮೀಟರ್ ದೂರದಲ್ಲಿಯೆ ಮೃತದೇಹ ಸಿಕ್ಕಿದೆ. ಆರೋಪಿಯಾದ ಹರೀಶ್ ಗೌಡ ಪರಾರಿಯಾಗಿದ್ದಾನೆ.

