ಬೆಂಗಳೂರು, ನವೆಂಬರ್ 12 : ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರದ ಆರೋಪದ ಹಿನ್ನಲೆಯಿಂದಾಗಿ ಈ ದಾಳಿಗಳು ನಡೆದಿದೆ. ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೀದರ್ ನ ಜಿಲ್ಲಾ ತರಬೇತಿ ಕೇಂದ್ರ ಅಧಿಕಾರಿಯಾದ ರವೀಂದ್ರ ರೊಟ್ಟೆರವರ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಡಿವೈಎಸ್ಪಿಯಾದ ಹನುಮಂತನವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವನ ಗ್ರಾಮ ಲೆಕ್ಕಾಧಿಕಾರಿಯಾದ ವಿಠ್ಠಲ್ ಡವಳೇಶ್ವರ ಮನೆ, ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಈ ಹಿಂದೆ ವಿಠ್ಠಲ್ ಡವಳೇಶ್ವರವರು ಅಕ್ರಮವಾಗಿ 1.10 ಕೋಟಿ ಹಣವನ್ನು ಚಿಕ್ಕೋಡಿಯಿಂದ ಬಾಗಲಕೋಟೆಗೆ ಸಾಗಿಸುವಾಗ ಸಿಕ್ಕಿಬಿದ್ದಿದ್ದರು.
ಮೈಸೂರು ನಗರ ಪಾಲಿಕೆಯ ವಲಯ ಆಯುಕ್ತರಾದ ನಾಗೇಶ್ ರವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶ್ರೀರಂಗಪಟ್ಟಣದಲ್ಲಿರುವ ಇನ್ನೊಂದು ಮನೆ ಮೇಲೂ ಲೋಕಾಯುಕ್ತ ದಾಳಿ ಮಾಡಿದೆ. ನಾಗೇಶ್ ಈ ಹಿಂದೆ ಶ್ರೀರಂಗಪಟ್ಟಣ ತಹಶೀಲ್ದಾರ್ ಆಗಿದ್ದರು.
ಧಾರವಾಡದ ಗಾಂಧಿನಗರದ ಬಡಾವಣೆಯಲ್ಲಿರುವ ಕೆಐಎಡಿಬಿ ಎಇಇ ಆಗಿರುವ ಗೋವಿಂದಪ್ಪ ಭಜಂತ್ರಿರವರ ಮನೆ ಮೇಲೆ ಡಿವೈಎಸ್ಪಿ ವೆಂಕನಗೌಡ ಪಾಟೀಲ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ದಾವಣಗೆರೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯ ನಿರ್ದೇಶಕರಾಗಿರುವ ಕಮಲ್ ರಾಜ್ ರವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿಯಾಗಿರುವ ಎಂಎಸ್ ಕೌಲಾಪುರೆ ನಾಯಕತ್ವದಲ್ಲಿ ಇನ್ಸ್ ಪೆಕ್ಟರ್ಗಳಾದ ಮಧುಸೂದನ್ ಮತ್ತು ಪ್ರಭು ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳಿಂದ ದಾಳಿ ನಡೆಸಲಾಗಿದೆ.

