ದೇಶದ ಭವಿಷ್ಯವನ್ನು ರೂಪಿಸಲಿರುವ ವಿದ್ಯಾರ್ಥಿಗಳಿಗೆ, ಮಕ್ಕಳ ದಿನಾಚರಣೆಯ ಉಡುಗೊರೆಯಾಗಿ ಕಳೆದ ವರ್ಷದಂತೆ ಈ ವರ್ಷವು ಉಡುಪಿ ವಿಧಾನಸಭಾ ಕ್ಷೇತ್ರದ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜಿನ ಸುಮಾರು 20,000 ವಿದ್ಯಾರ್ಥಿಗಳಿಗೆ ರೂ. 15 ಲಕ್ಷ ವೆಚ್ಚದಲ್ಲಿ ಪೆನ್ ವಿತರಣೆ ಮಾಡುವುದಾಗಿ ಉಡುಪಿಯ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ತಿಳಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಸುಮಾರು 127 ಶಾಲಾ ಕಾಲೇಜುಗಳಿಗೆ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪೆನ್ ವಿತರಣೆ ಮಾಡಲಾಗುವುದು.
ಉಡುಪಿ ಜಿಲ್ಲೆಯು ಶಿಕ್ಷಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರಿ ಶಾಲಾ ಕಾಲೇಜುಗಳ ಮೂಲ ಸೌಕರ್ಯ ಅಭಿವೃದ್ಧಿಗೆ, ಸರ್ಕಾರದ ಅನುದಾನದ ಜೊತೆಗೆ ಹಲವಾರು ಕಂಪೆನಿಗಳ ಸಿ. ಎಸ್. ಆರ್. ನಿಧಿ ಹಾಗೂ ದಾನಿಗಳ ಸಹಕಾರ ಪಡೆದು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಾಸಕರ ನೆಲೆಯಲ್ಲಿ ಆದ್ಯತೆ ನೀಡಿ ಕಾರ್ಯಪ್ರವೃತ್ತವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರತಿವರ್ಷ ಶಾಲಾ ಪ್ರಾರಂಭದ ದಿನದಂದು ಕ್ಷೇತ್ರದ 20 ಸಾವಿರ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ಸ್ವಾಗತಿಸುವ ಕಾರ್ಯಕ್ರಮ ಮಾಡುತ್ತಿದ್ದು, ಹಲವು ವರ್ಷಗಳಿಂದ ನಿರಂತರವಾಗಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ದಕ್ಷಿಣ ಕನ್ನಡ & ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ & ಪುಷ್ಪಾನಂದ ಫೌಂಡೇಶನ್ ಮೂರು ಸಂಸ್ಥೆಗಳ ಮೂಲಕವೂ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಉತ್ತೇಜಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

