ಪುತ್ತೂರು: ಒಂಭತ್ತು ವರ್ಷದ ಹಿಂದೆ ಬಾಲಕಿಯ ಜತೆಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಶಿಕ್ಷೆ, ದಂಡ ವಿಧಿಸಲಾಗಿದೆ.
ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ ಡಿ. ಅವರ ಪೀಠ ಈ ಆದೇಶ ನೀಡಿದೆ.
ಕಬಕ ವಿದ್ಯಾಪುರ ನಿವಾಸಿ ಮಹಮ್ಮದ್ ಮುಸ್ತಾಫ ಯಾನೆ ಮುಸ್ತಾಫ ಶೇಖ್ ಶಿಕ್ಷೆಗೆ ಗುರಿಯಾದವ. 2015ರ ಡಿ. 4ರಂದು ಕಬಕ ಗ್ರಾಮದಲ್ಲಿ ನಡೆದು ಹೋಗುತ್ತಿದ್ದ ಬಾಲಕಿಯನ್ನು ಕೈ ಹಿಡಿದು ಎಳೆದು ಅನುಚಿತವಾಗಿ ವರ್ತಿಸಿದ್ದು, ಈ ಸಂದರ್ಭದಲ್ಲಿ ಬಾಲಕಿ ತಪ್ಪಿಸಿಕೊಂಡು ಹೋಗಿ ಮನೆಯವರಲ್ಲಿ ವಿಷಯ ತಿಳಿಸಿದ್ದಳು. ಬಾಲಕಿ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
14 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ 3 ವರ್ಷ ಜೈಲು ಮತ್ತು 21,400 ರೂ. ದಂಡ ನೀಡಲು ಆದೇಶಿಸಲಾಗಿದೆ. ದಂಡದ ಮೊತ್ತದಲ್ಲಿ 15 ಸಾವಿರ ರೂ. ಅನ್ನು ಬಾಲಕಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ಆದೇಶಿಸಲಾಗಿದೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

