ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣವನ್ನು ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ (NIA) ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಈ ದೋಷಾರೋಪ ಪಟ್ಟಯಿಂದ ಸ್ಪೋಟಕ ವಿಚಾರವೊಂದು ಬಯಲಾಗಿದೆ. ಈ ಪ್ರಕರಣದಲ್ಲಿ ಆರು ಜನರ ಕೈವಾಡವಿದ್ದು, ಇವರು ಐಸಿಸ್ ಜೊತೆ ನಂಟು ಹೊಂದಿದ್ದರು ಎಂದು ತಿಳಿದುಬಂದಿತ್ತು.
ಆರೋಪಿಗಳಾದ ಅಬ್ದುಲ್ ಮತೀನ್ ತಾಹ, ಮುಸಾವೀರ್ ಹುಸೇನ್, ಶಾರಿಕ್, ಅರಾಫತ್ ಅಲಿ, ಮಾಜ್ ಮುನೀರ್ ಮತ್ತು ಮುಜಾಮಿಲ್ ಷರೀಫ್ ಐಸಿಸ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ಈ ಆರು ಆರೋಪಿಗಳ ಪೈಕಿ ನಾಲ್ವರಿಗೆ ಐಸಿಸ್ ಬಾಂಬ್ ತಯಾರಿಕೆಯ ತರಬೇತಿ ನೀಡಿದೆ. ಅಬ್ದುಲ್ ಮತೀನ್ ತಾಹ, ಮುಸಾವೀರ್, ಶಾರಿಕ್ ಮತ್ತು ಮಾಜ್ ಮುನೀರ್ ಬಾಂಬ್ ತಯಾರಿಸುವ ತರಬೇತಿ ಕೇವಲ ಒಂದು ವಾರದಲ್ಲೇ ಪಡೆದಿದ್ದಾರೆ.
ಬಾಂಬ್ ತಯಾರಿಕೆಗೆ ಬೇಕಾಗಿದ್ದ ಎಲ್ಲಾ ಕಚ್ಚಾ ವಸ್ತುಗಳನ್ನು ಆನ್ಲೈನ್ ಮೂಲಕ ಖರೀದಿಸಿ, ಒಂದು ವಾರದಲ್ಲಿಯೆ ಬಾಂಬ್ ನ್ನು ತಯಾರಿಸಿದ್ದರು. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಘಟನೆ, ಬಿಜೆಪಿ ಕಚೇರಿ ಬಳಿ ಇಟ್ಟಿದ್ದ ಬಾಂಬ್, ರಾಮೇಶ್ವರಂ ಕೆಫೆಯಲ್ಲಿ ಇಟ್ಟಿದ್ದ ಬಾಂಬ್ಗಳನ್ನು ಕೇವಲ ಒಂದೆ ವಾರದಲ್ಲಿ ತಯಾರಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿತವಾಗಿದೆ.
ಬಾಂಬ್ ಎಲ್ಲಿ ಇಡಬೇಕು ಅಂತ ಯೋಜನೆಯಾದ ಮೇಲೆ, ಆರೋಪಿಗಳು ಬಾಂಬ್ ತಯಾರಿಕೆಗೆ ಮುಂದಾಗುತ್ತಿದ್ದರು. ಈ ಬಾಂಬ್ಗಳಿಗೆ 90 ನಿಮಿಷಗಳ ಟ್ರೈಮರ್ ಸೆಟ್ ಮಾಡಿ ಇಟ್ಟಿದ್ದರು. ಮಂಗಳೂರು, ಬಿಜೆಪಿ ಕಚೇರಿ ಮತ್ತು ರಾಮೇಶ್ವರಂ ಕೆಫೆ ಈ ಮೂರು ಕಡೆಗಳಲ್ಲಿ 90 ನಿಮಿಷಗಳ ಬಾಂಬ್ ಸೆಟ್ ಮಾಡಿದ್ದರು. ಆದರೆ, ಮಂಗಳೂರು, ಬಿಜೆಪಿ ಕಚೇರಿ ಈ ಎರಡು ಕಡೆ ಇಟ್ಟಿದ್ದ ಬಾಂಬ್ ಫೇಲ್ ಆಗಿದ್ದು, ರಾಮೇಶ್ವರಂ ಕೆಫೆಯಲ್ಲಿ ಮಾತ್ರ ಬಾಂಬ್ ಸ್ಪೋಟಿಸಿ ಆರೋಪಿಗಳ ಯೋಜನೆ ಸಕ್ಸಸ್ ಆಗಿತ್ತು. ಈ ಎಲ್ಲ ಅಂಶಗಳನ್ನು ಎನ್ಐಎ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಿದೆ.

