ಉಡುಪಿ : ಇಂಗ್ಲೀಷ್ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ ಈಗಾಗಲೇ ಬಹುತೇಕ ಕನ್ನಡ ಮಾಧ್ಯಮ ಶಾಲೆಗಳು ಮೂಲೆಗುಂಪಾಗಿದೆ. ಕನ್ನಡ ಮಾಧ್ಯಮ ಸರ್ಕಾರಿ ಶಾಲೆ ಎಂದಾಕ್ಷಣ ನಮಗೆ ನೆನಪಿಗೆ ಬರೋದು ರಿಷಬ್ ಶೆಟ್ಟಿ ರವರ ನಿರ್ದೇಶನದಲ್ಲಿ ಮೂಡಿ ಬಂದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಈ ಚಿತ್ರದ ಕಥೆ ಹಂದರವನ್ನೆ ಹೋಲಿಕೆಯಾಗುವಂತ ಘಟನೆಯೊಂದು ರಿಷಬ್ ಶೆಟ್ಟಿ ಅವರ ಸ್ವಂತ ಊರಾದ ಕುಂದಾಪುರದಲ್ಲಿಯೆ ನಡೆದಿದೆ.
ಶಾಲೆಯ ಉಳಿವಿಗಾಗಿ ಶಾಲಾ ವಿದ್ಯಾರ್ಥಿಗಳೇ ಹೋರಾಟಕ್ಕೆ ಇಳಿಯುವ ಸಿನಿಮಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು. ಇದೇ ಕಥೆ ಈಗ ಕುಂದಾಪುರದ ಕಾಳಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳದಾಗಿದೆ. 103 ವರ್ಷಗಳ ಇತಿಹಾಸ ಇರುವ ಶಾಲೆಗೆ ಈಗ ಕಂಟಕ ಉಂಟಾಗಿದೆ.
ಕುಂದಾಪುರ ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬೀಳುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಪ್ರಭಾವಿಗಳ ಕಣ್ಣುಬಿದ್ದಿದೆ.
ಹೆದ್ದಾರಿಯ ಪಕ್ಕದಲ್ಲಿಯೆ ಇರುವ ಕಾಳಾವರ ಹಿರಿಯ ಪ್ರಾಥಮಿಕ ಶಾಲೆಗೆ, ಹಿಂದೆ ಜಾಗವನ್ನು ದಾನವಾಗಿ ಮಾಡಿದ ಕುಟುಂಬದವರೇ ಈಗ ಅದೇ ಜಾಗಕ್ಕಾಗಿ ದಾವೆ ಹೂಡಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಲೆಗೆಂದು ಜಾಗವನ್ನು ದಾನವಾಗಿ ನೀಡಿದ ಕುರಿತು ದಾನಪತ್ರವು ಶಾಲಾ ಆಡಳಿತ ಮಂಡಳಿಯ ಕೈಯಲ್ಲಿದೆ. ಹಾಗಾಗಿ ಈ ಬಗ್ಗೆ ಕೋರ್ಟ್ ನಲ್ಲಿ ಹೋರಾಟ ಮುಂದುವರಿಸುವುದಾಗಿ ಶಾಲಾ ಆಡಳಿತ ಮಂಡಳಿ ನಿರ್ಧರಿಸಿದೆ.
1954ರಲ್ಲಿ, ಅಂದಿನ ಶಾಲಾ ಉಸ್ತುವಾರಿ ಅಧಿಕಾರಿ, ಡಿಸ್ಟ್ರಿಕ್ಟ್ ಬೋರ್ಡ್ ಪ್ರೆಸಿಡೆಂಟ್ಗೆ ಶಾಲೆಯ ದಾನ ಪತ್ರ ಮಂಜೂರಾಗಿರುವುದು ದಾಖಲೆಗಳಿವೆ. ಅದರೆ ಈಗ ಈ ಶಾಲೆಯನ್ನು ಸುಪರ್ದಿಗೆ ಪಡೆಯಲು ಸ್ಥಳೀಯ ಪ್ರಭಾವಿ ವ್ಯಕ್ತಿಯಾದ ಮಂಜಯ್ಯ ಶೆಟ್ಟಿಯವರು ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ.

