ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಪರಿಗಣಿಸಲಾಗಿದೆ. ಪತ್ರಿಕಾ ಮಾಧ್ಯಮವು ನಮಗೆ ಈ ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದರ ಕ್ಷಣ ಕ್ಷಣದ ಸುದ್ದಿಗಳನ್ನು ನೀಡುತ್ತದೆ. ನಾವು ಪ್ರತಿದಿನ ಪತ್ರಿಕೆಗಳನ್ನು ಓದುತ್ತೇವೆ ಅಥವಾ ಟಿ.ವಿ, ಸ್ಮಾರ್ಟ್ ಫೋನ್ಗಳಲ್ಲಿ ಸುದ್ದಿಗಳನ್ನು ನೋಡುತ್ತೇವೆ. ರಾಜಕೀಯ, ಕ್ರೀಡೆ, ವಿಜ್ಞಾನ, ಮನೋರಂಜನೆ ಹೀಗೆ ಎಲ್ಲಾ ಕ್ಷೇತ್ರದ ವಿಷಯಗಳ ಬಗ್ಗೆ ಪತ್ರಿಕಾ ಮಾಧ್ಯಮವು ನಮಗೆ ಸುದ್ದಿಯನ್ನು ನೀಡುತ್ತದೆ. ಆದರೆ ಇದು ಸುದ್ದಿ ಕೊಡುವುದಷ್ಟೇ ಅಲ್ಲ, ಮುಖ್ಯವಾಗಿ ಪತ್ರಿಕೋದ್ಯಮವು ಸಾರ್ವಜನಿಕರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕಾರ್ಯನಿವರ್ಹಿಸುತ್ತದೆ. ಪತ್ರಿಕಾ ಮಾಧ್ಯಮದ ಗುರಿ ಜನರಿಗೆ ಎದುರಾಗುವ ಯಾವುದೇ ಅನ್ಯಾಯವನ್ನು ಬೆಳಕಿಗೆ ತರುವುದು ಮತ್ತು ಸಾರ್ವಜನಿಕ ವ್ಯವಸ್ಥೆಯ ದುಸ್ಥಿತಿಯನ್ನು ಎತ್ತಿ ತೋರಿಸುವುದಾಗಿದೆ. ಹೀಗೆ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕಾ ಮಾಧ್ಯಮವು ವಹಿಸುವ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್ 16 ರಂದು ಭಾರತದಲ್ಲಿ ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ.
1956 ರಲ್ಲಿ ಮೊದಲ ಪತ್ರಿಕಾ ಆಯೋಗವು ಪತ್ರಿಕೋದ್ಯಮದ ನೈತಿಕತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪೂರೈಸುವ ಉದ್ದೇಶದಿಂದ ಶಾಸನಬದ್ಧ ಅಧಿಕಾರವನ್ನು ಹೊಂದಿರುವ ಸಂಸ್ಥೆಯನ್ನು ರಚಿಸಲು ನಿರ್ಧರಿಸಿತು. ಈ ನಿಟ್ಟಿನಲ್ಲಿ 1966, ಜುಲೈ 04 ರಂದು ಪ್ರೆಸ್ ಕೌನ್ಸಿಲ್ ಅನ್ನು ಭಾರತದಲ್ಲಿ ಸ್ಥಾಪಿಸಲಾಯಿತು. ಆದರೆ ಈ ಸಂಸ್ಥೆ ನವೆಂಬರ್ 16, 1966 ರಿಂದ ತನ್ನ ಔಪಚಾರಿಕ ಕೆಲಸವನ್ನು ಪ್ರಾರಂಭಿಸಿತು. ದೇಶದಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಈ ಸಂಸ್ಥೆಯ ಸ್ಥಾಪನೆಯ ಸ್ಮರಣಾರ್ಥವಾಗಿ ರಾಷ್ಟ್ರೀಯ ಪತ್ರಿಕಾ ದಿನವನ್ನು ಪ್ರತಿವರ್ಷ ನವೆಂಬರ್ 16 ರಂದು ಆಚರಿಸಲಾಗುತ್ತದೆ.
ಪತ್ರಿಕಾ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ. ಪತ್ರಿಕಾ ಸ್ವಾತಂತ್ರ್ಯವು ಅತೀ ಮುಖ್ಯವಾಗಿದೆ. ಇದು ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ದೇಶದ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗೆ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕಾ ಮಾಧ್ಯಮವು ವಹಿಸುವ ಪಾತ್ರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ ಪತ್ರಕರ್ತರಿಗೂ ಈ ದಿನ ಗೌರವವನ್ನು ನೀಡಲಾಗುತ್ತದೆ.

