ಉತ್ತರ ಪ್ರದೇಶ : ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ, ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್ನಲ್ಲಿ ಅಗ್ನಿ ಅವಘಡ ಸಂಭವಿಸಿ, 10 ನವಜಾತ ಶಿಶುಗಳು ಸಜೀವ ದಹನವಾಗಿರುವ ದುರ್ಘಟನೆಯು ಶುಕ್ರವಾರದ ತಡರಾತ್ರಿಯಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಶುಕ್ರವಾರದ ತಡರಾತ್ರಿ ಶಾರ್ಟ್ ಸರ್ಕೀಟ್ ಉಂಟಾಗಿ, ಶಿಶು ತೀವ್ರ ನಿಗಾ ಘಟಕ (ಎನ್ಐಸಿಯು)ದ ಸುತ್ತಲೂ ಬೆಂಕಿ ಆವರಿಸಿದೆ. ಬೆಂಕಿ ಹೊತ್ತಿ ಕೊಂಡ ಕೂಡಲೇ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಾಡಿ ಕೊಳ್ಳಲು ತೊಡಿಗಿದ್ದಾರೆ. ಆಸ್ಪತ್ರೆಯ ವೈದ್ಯರು ಮತ್ತು ಇತರೆ ಸಿಬ್ಬಂದಿಗಳು ವಾರ್ಡ್ನ ಕಿಟಕಿ ಗಾಜುಗಳನ್ನು ಒಡೆದು, ರೋಗಿಗಳನ್ನು ರಕ್ಷಿಸಲಾಗಿದೆ.
ಇಷ್ಟರಲ್ಲಾಗಲೇ 10 ನವಶಿಶುಗಳ ಸಜೀವ ದಹನವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಲುಪುವ ವೇಳೆಗಾಗಲೇ ವಾರ್ಡ್ ದಟ್ಟ ಹೊಗೆಯಿಂದ ತುಂಬಿಕೊಂಡಿತ್ತು. ಈ ದುರ್ಘಟನೆಯಲ್ಲಿ 10 ನವಜಾತ ಶಿಶುಗಳು ಸುಟ್ಟು ಕರಕಲಾಗಿವೆ. ಈ ನಡುವೆ ವಾರ್ಡ್ನ ಕಿಟಕಿಯನ್ನು ಒಡೆದು ಹಲವು ಕಂದಮ್ಮಗಳನ್ನು ರಕ್ಷಿಸಲಾಗಿದೆ.
ಈ ಘಟನೆಯಲ್ಲಿ ಹಲವು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ವಾರ್ಡ್ ನಲ್ಲಿ ಸುಮಾರು 54 ಮಕ್ಕಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂಬುದು ವರದಿಗಳಿಂದ ತಿಳಿದುಬಂದಿದೆ.
ಮಕ್ಕಳ ವಾರ್ಡ್ನ 2 ಘಟಕಗಳ ಪೈಕಿ ಒಂದರಲ್ಲಿ ಶಾರ್ಟ್ ಸರ್ಕೀಟ್ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದ್ದು, ಎನ್.ಐ.ಸಿ.ಯು ಹೊರ ಭಾಗದಲ್ಲಿದ್ದ ಮಕ್ಕಳನ್ನು ರಕ್ಷಿಸಲಾಗಿದೆ. ಮತ್ತು ಒಳ ಭಾಗದಲ್ಲಿದ್ದ ಕೆಲವು ಮಕ್ಕಳ ಜೀವವು ಉಳಿದಿದೆ ಎಂದು ಮಾಹಿತಿ ದೊರೆತಿದೆ.
ಈ ದುರ್ಘಟನೆ ಕುರಿತು ಉತ್ತರಪ್ರದೇಶ ಸರ್ಕಾರವು ತನಿಖೆಗೆ ಆದೇಶಿಸಿದ್ದು, ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿರುತ್ತದೆ.
ಸ್ಥಳಕ್ಕೆ ಆರು ಅಗ್ನಿಶಾಮಕ ವಾಹನಗಳೊಂದಿಗೆ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ದುರ್ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರು, ಘಟನೆ ಬಗ್ಗೆ ಮಾಹಿತಿ ಪಡೆದು ಉಪ ಮುಖ್ಯಮಂತ್ರಿಯಾದ ಬ್ರಜೇಶ್ ಪಾಠಕ್ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಝಾನ್ಸಿಗೆ ಕಳುಹಿಸಿದ್ದೇನೆಂದು ಮತ್ತು ಎಲ್ಲಾ ಮಕ್ಕಳು ಕೂಡಲೇ ಗುಣಮುಖರಾಗಲಿ ಎಂದು ದೇವರ ಬಳಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ.

