ಭವಿಷ್ಯ ನಿಧಿ ಕಾಯ್ದೆಯ ಪ್ರಕಾರ ಪ್ರತಿ ತಿಂಗಳು ನೌಕರರ ವೇತನದಲ್ಲಿ ಭವಿಷ್ಯ ನಿಧಿಗೆ ಒಂದಿಷ್ಟು ಮೊತ್ತವನ್ನು ಕಡಿತಗೊಳಿಸಿ ಆ ಮೊತ್ತವನ್ನು ನೌಕರರ ಭವಿಷ್ಯ ನಿಧಿಖಾತೆಗೆ ಪಾವತಿಸಬೇಕು. ಆದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ಈ ನಿಯಮ ಪಾಲಿಸುವಲ್ಲಿ ವಿಫಲವಾಗಿವೆ.
ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ, ಸರ್ಕಾರದ ಮುಂದೆ ಕೈಯೊಡ್ಡುವ ಪರಿಸ್ಥಿತಿ ನಿರ್ಮಾನವಾಗಿದೆ. ಕಳೆದ ಹಲವು ತಿಂಗಳಿನಿಂದ ನೌಕರರ ಭವಿಷ್ಯ ನಿಧಿ ಪಾವತಿಸುವಲ್ಲಿಯೂ ರಾಜ್ಯ ರಸ್ತೆ ಸಾರಿಗೆ ನಿಗಮಗಳು ವಿಫಲವಾಗಿವೆ, ಅದಕ್ಕಾಗಿ ಆರ್ಥಿಕವಾಗಿ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ.
ಒಟ್ಟಾರೆಯಾಗಿ ನಾಲ್ಕೂ ನಿಗಮಗಳ ಭವಿಷ್ಯ ನಿಧಿ ಬಾಕಿ ಹಾಗೂ ವಿಳಂಬ, ಬಡ್ಡಿ ಸೇರಿದಂತೆ 2024ರ ಅಕ್ಟೋಬರ್ವರೆಗೆ 2,792.61 ಕೋಟಿ ಪಾವತಿಸಲು ಬಾಕಿ ಉಳಿದಿರುತ್ತದೆ. ಈ ಮೊತ್ತವನ್ನು ಪಾವತಿಸಲು ಸಾಧ್ಯವೇ ಇಲ್ಲ ಎಂದು ಹೇಳಿರುವ ನಿಗಮಗಳು, ಅದಕ್ಕಾಗಿ ಸರ್ಕಾರದಿಂದ ನೆರವು ನೀಡುವಂತೆ ಕೋರಿವೆ.
ಹಲವು ತಿಂಗಳಿನಿಂದ ಭವಿಷ್ಯ ನಿಧಿಯ ಮೊತ್ತವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಭವಿಷ್ಯ ನಿಧಿ ಕಚೇರಿಯ ಪ್ರಾದೇಶಿಕ ಆಯುಕ್ತರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾದರೆ ರಾಜ್ಯ ಸಾರಿಗೆ ನೌಕರರಿಗೂ ಸಮಸ್ಯೆ ಎದುರಾಗಲಿದೆ ಎಂದು ತಿಳಿಸಿದ್ದಾರೆ.

