ವಕ್ಫ್ ಭೂ ಕಬಳಿಕೆಯ ವಿರುದ್ಧ ಬೀದರ್ ನಿಂದ ಬೆಳಗಾವಿವರಿಗೆ ಆಯೋಜಿಸಿರುವ ಬೃಹತ್ ಜನಜಾಗೃತಿ ಹೋರಾಟವು ಬಿಜೆಪಿಯ ಹಿರಿಯ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾಕರಹೊಳಿ ನೇತೃತ್ವದಲ್ಲಿ ಬೀದರ್ ನಲ್ಲಿ ಆರಂಭಗೊಂಡಿದೆ. ಈ ಮೂಲಕವಾಗಿ ಬಿಜೆಪಿಯ ಬಣ ಸಂಘರ್ಷವು ತಾರಕಕ್ಕೇರಿದಂತಾಗಿದೆ.
ಬಿಜೆಪಿಯ ಹಿರಿಯ ನಾಯಕ ಹಾಗೂ ಭಿನ್ನರ ಬಣದ ನೇತೃತ್ವವನ್ನು ವಹಿಸಿಕೊಂಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ಶಾಸಕ ಬಿ.ಪಿ ಹರೀಶ್, ಕೇಂದ್ರದ ಮಾಜಿ ಸಚಿವ ಜಿ.ಎಂ ಸಿದ್ದೇಶ್ವರ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಎನ್ .ಆರ್ ಸಂತೋಷ್ ಮತ್ತು ಈಶ್ವರ್ ಸಿಂಗ್ ಠಾಕೂರ್ ಮೊದಲಾದವರು ಉಪಸ್ಥಿತರಿದ್ದರು.
ಧರ್ಮಾಪುರ ಗ್ರಾಮಕ್ಕೆ ಭೇಟಿ ನೀಡಿದ ಯತ್ನಾಳ್ ಬಣಕ್ಕೆ ಪಕ್ಷದ ಸ್ಥಳೀಯ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ 2 ಬಣಗಳ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.
ತಮ್ಮ ವಿರುದ್ಧ ನಿರಂತರವಾಗಿ ಬಂಡಾಯ ಸಾರುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ, ಕ್ರಮ ಕೈಗೊಳ್ಳಬೇಕು ಎಂದು ವರಿಷ್ಠರ ಮೇಲೆ ಒತ್ತಡ ಹೇರುವುದಕ್ಕೆ ಬಿಜೆಪಿ ಆಧ್ಯಕ್ಷರಾದ ವಿಜಯೇಂದ್ರ ಮುಂದಾಗಿದ್ದಾರೆ.

